ಸದ್ಯದಲ್ಲೇ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕಂಟೆಸ್ಟೆಂಟ್ ಗಳನ್ನು ಹುಡುಕಲಾಗುತ್ತಿದೆ. ಅದರಲ್ಲೂ ರಿಯಲ್ ಲೈಫ್ ನಲ್ಲಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರನ್ನು ಹುಡುಕಿ ಕರೆತರಲಾಗುತ್ತಿದೆ. ಅಂತೆಯೇ ಕನ್ನಡದಲ್ಲಿ ಸದ್ದು ಮಾಡಿ ಸದ್ಯ ಟಾಲಿವುಡ್ ನಲ್ಲಿ ಮಿಂಚುತ್ತಿರುವ ಕೊಡಗಿನ ಹುಡುಗಿ ನಟಿ ಜ್ಯೋತಿ ರೈ ಅವರಿಗೆ ಬಿಗ್ ಬಾಸ್ ಆಫರ್ ನೀಡಿದೆ.ಆದರೆ ಜ್ಯೋತಿ ರೈ ಈ ಅವಕಾಶವನ್ನು ಒಪ್ಪಿಕೊಂಡಿಲ್ಲ. ಈ ವಿಚಾರವನ್ನು ಸ್ವತಃ ಜ್ಯೋತಿ ರೈ ತಿಳಿಸಿದ್ದಾರೆ.
ಕಿರುತೆರೆಯ ಸೀರಿಯಲ್ಗಳನ್ನು ನಟಿಸಿ ಜ್ಯೋತಿ ರೈ ಅವರು ಸಖತ್ ಫೇಮಸ್ ಆಗಿದ್ದಾರೆ. ಈ ಮೊದಲಿನ ಬಿಗ್ ಬಾಸ್ ಸೀಸನ್ಗಳಲ್ಲಿ ಕಿರುತೆರೆಯ ಅನೇಕ ಸೆಲೆಬ್ರಿಟಿಗಳಿಗೆ ಅವಕಾಶ ಸಿಕ್ಕಿತ್ತು. ಈ ಬಾರಿಗೂ ಸಿನಿಮಾ, ಸೀರಿಯಲ್, ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಇರುವವರಿಗೆ ಮಣೆ ಹಾಕಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಜ್ಯೋತಿ ರೈ ಅವರಿಗೂ ಆಫರ್ ನೀಡಲಾಗಿತ್ತು ಎಂಬ ಮಾಹಿತಿ ಈಗ ಬಹಿರಂಗ ಆಗಿದೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿ ಜ್ಯೋತಿ ರೈ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನಾನು ಕನ್ನಡ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಅನೇಕರು ವಿಚಾರಿಸುತ್ತಿದ್ದಾರೆ. ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬಂದಾಗ ನಾನು ಅದನ್ನು ಗೌರವದಿಂದ ತಿರಸ್ಕರಿಸಿದೆ. ಈ ಮೊದಲೇ ಒಪ್ಪಿಕೊಂಡ ಕೆಲಸಗಳ ಕಾರಣಗಳಿಂದ ಈ ನಿರ್ಧಾರ ತೆಗೆದುಕೊಂಡೆ. ಅವಕಾಶಕ್ಕಾಗಿ ಹಾಗೂ ನನ್ನ ಅಭಿಮಾನಿಗಳ ಬೆಂಬಲಕ್ಕೆ ನಾನು ಚಿರಋಣಿ’ ಎಂದು ಜ್ಯೋತಿ ರೈ ಅವರು ಬರೆದುಕೊಂಡಿದ್ದಾರೆ.
ಒಂದಷ್ಟು ದಿನಗಳ ಹಿಂದೆ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ಖಾಸಗಿ ವಿಡಿಯೋಗಳು ವೈರಲ್ ಆಗಿದ್ದವು. ಆದರೆ ಅವು ತಮ್ಮ ವಿಡಿಯೋ ಅಲ್ಲ ಎಂದು ಜ್ಯೋತಿ ಅವರು ಸ್ಪಷ್ಟನೆ ನೀಡಿದರು ಹಾಗೂ ಮಾನಹಾನಿಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದರು. ಜೊತೆಗೆ ಕಳೆದ ಎರಡು ದಿನಗಳ ಹಿಂದೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದರು. ನಟಿ ಅದರಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು ನಟಿಯ ಫೋಟೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು.