ಶ್ರಾವಣ ಮಾಸದಲ್ಲಿ ನಾವು ಸ್ವಾಗತಿಸುವ ಮೊದಲ ಹಬ್ಬ ನಾಗರ ಪಂಚಮಿ. ನಾಗ ಪಂಚಮಿ, ಹೆಸರೇ ಸೂಚಿಸುವಂತೆ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಮುಂಬರುವ ಎಲ್ಲಾ ಹಬ್ಬಗಳಿಗೂ ಆದಿಯಾಗಿದೆ. ಮಹಿಳೆಯರು ಉಪವಾಸ ಆಚರಿಸುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ, ಆಭರಣಗಳನ್ನು ಧರಿಸುತ್ತಾರೆ.
ತಮ್ಮ ಸಹೋದರನ ಆರೋಗ್ಯ ಮತ್ತು ಯಶಸ್ಸಿಗಾಗಿ ನಾಗದೇವತೆಗೆ ಪೂಜೆ ಸಲ್ಲಿಸುತ್ತಾರೆ. ನಾಗದೋಷ ನಿವಾರಣೆ, ನಾಗನಿಂದ ರಕ್ಷಣೆಗೆ ಪ್ರಾರ್ಥಿಸಿ ಆಚರಿಸುವ ಹಬ್ಬ ಇದು ಎಂದು ನಂಬಲಾಗಿದೆ.
ನಾಗರ ಪಂಚಮಿ 2024 ರ ಪೂಜೆಗೆ ಶುಭ ಮುಹೂರ್ತ
ನಾಗರ ಪಂಚಮಿ ಪೂಜೆಯ ಶುಭ ಮುಹೂರ್ತವು 2024 ರ ಆಸಗ್ಟ್ 9ರಂದು ಮುಂಜಾನೆ 05:47 ಮತ್ತು ಬೆಳಗ್ಗೆ 08:27ರ ನಡುವೆ ಇರುತ್ತದೆ ಎಂದು ನಿರ್ಧರಿಸಲಾಗಿದೆ. ಇದು 2 ಗಂಟೆ 40 ನಿಮಿಷಗಳ ಅವಧಿಯನ್ನು ಹೊಂದಿದೆ. ಈ ಪವಿತ್ರ ಹಬ್ಬದ ಆಧ್ಯಾತ್ಮಿಕ ಪ್ರಯೋಜನಗಳನ್ನು ಗರಿಷ್ಠವಾಗಿ ಪಡೆದುಕೊಳ್ಳಲು ಈ ಗೊತ್ತುಪಡಿಸಿದ ಕಾಲಮಿತಿಯೊಳಗೆ ಭಕ್ತರು ತಮ್ಮ ಪೂಜೆ ಮತ್ತು ಆಚರಣೆಗಳನ್ನು ನಡೆಸಬೇಕೆಂದು ಸಲಹೆ ನೀಡಲಾಗಿದೆ.
ನಾಗರ ಪಂಚಮಿ ಪೂಜೆ ವಿಧಾನ
- ಎಂಟು ಹಾವುಗಳನ್ನು ಈ ಹಬ್ಬದ ಪ್ರಮುಖ ದೇವರುಗಳೆಂದು ಪರಿಣಿಸಲಾಗುತ್ತದೆ. ಈ ದಿನ ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಳಿರ, ಕಾರ್ಕೋಟಕ ಮತ್ತು ಶಂಖ ಎಂಬ ಎಂಟು ಸರ್ಪಗಳನ್ನು ಪೂಜಿಸಲಾಗುತ್ತದೆ.
- ಚತುರ್ಥಿಯ ದಿನ ಒಂದು ಹೊತ್ತಿನ ಊಟ ಮಾಡಿ ಪಂಚಮಿ ದಿನ ಉಪವಾಸ ಮಾಡಿ ಸಂಜೆ ಒಂದು ಹೊತ್ತಿನ ಊಟ ಮಾಡಿ.
- ಪೂಜೆಗಾಗಿ ಮರದ ಪೀಠ ಅಥವಾ ಮಣೆಯ ಮೇಲೆ ಮಣ್ಣಿನ ಮೂರ್ತಿ ಅಥವಾ ಹಾವಿನ ವಿಗ್ರಹವನ್ನು ಇರಿಸಲಾಗುತ್ತದೆ.
- ನಂತರ ನಾಗ ದೇವರಿಗೆ ಅರಿಶಿನ, ಕುಂಕುಮ, ಅಕ್ಕಿ ಮತ್ತು ಹೂವುಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ.
- ನಂತರ ಹಸಿ ಹಾಲು, ತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ಪೀಠದ ಮೇಲೆ ಪ್ರತಿಷ್ಠಾಪಿಸಲಾದ ನಾಗ ದೇವರಿಗೆ ಅರ್ಪಿಸಬೇಕು.
- ಪೂಜೆಯ ನಂತರ ನಾಗದೇವರಿಗೆ ಆರತಿಯನ್ನು ಮಾಡಲಾಗುತ್ತದೆ.
- ಈ ದಿನ ನೀವು ಹಾವಾಡಿಗರಿಗೆ ಸ್ವಲ್ಪ ದಕ್ಷಿಣೆಯನ್ನು ನೀಡಿ ಹಾವಿಗೆ ಹಾಲೆರೆರೆಯಬಹುದು.
- ಈ ದಿನ ನಾಗರ ಪಂಚಮಿ ಕಥೆಯನ್ನು ನೀವು ಕೇಳಬೇಕು ಅಥವಾ ಓದಬೇಕು.
- ಇನ್ನು ಸರಳವಾಗಿ, ಮುಂಜಾನೆ ಬೇಗ ಎದ್ದು ಶುದ್ಧರಾಗಿ ಹೊಸ ಅಥವಾ ಒಗೆದ ಬಟ್ಟೆಯನ್ನು ಧರಿಸಿ, ನಾಗರ ಕ್ಲಲುಗಳಿಗೆ ಹಾಲೆರೆದು, ಅರಿಶಿನ,ಕುಂಕುಮ, ಕೇದಿಗೆ ಹೂವು, ನಾಗರಿಗೆ ಪ್ರಿಯವಾದ ಭೋಗವನ್ನು ಅರ್ಪಿಸಿ, ದೂಫ – ದೀಪ ಬೆಳಗಿ ಪ್ರದಕ್ಷಿಣೆಯನ್ನು ಹಾಕಿ ಬರಬಹುದು.
ನಾಗರಪಂಚಮಿಮಹತ್ವ
ಹಿಂದೂ ನಂಬಿಕೆಯ ಪ್ರಕಾರ, ಪ್ರಾಚೀನ ಕಾಲದಿಂದಲೂ ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಆದ್ದರಿಂದ ನಾಗರ ಪಂಚಮಿಯ ದಿನದಂದು ನಾಗರ ಹಾವುಗಳಿಗೆ ಪೂಜೆಯನ್ನು ಮಾಡುವುದು ಹೆಚ್ಚಿನ ಮಹತ್ವವನ್ನು ಹೊಂದಿದೆ. ನಾಗರ ಪಂಚಮಿಯ ದಿನದಂದು ಹಾವುಗಳನ್ನು ಪೂಜಿಸುವ ಜನರು ಹಾವು ಕಡಿತದಿಂದ ರಕ್ಷಣೆಯನ್ನು ಪಡೆದುಕೊಳ್ಳುತ್ತಾರೆ. ಈ ದಿನ ಹಾವಿಗೆ ಹಾಲಿನಿಂದ ಅಭಿಷೇಕವನ್ನು ಮಾಡಿದರೆ ಶಾಶ್ವತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಮನೆಯ ಪ್ರವೇಶ ದ್ವಾರದಲ್ಲಿ ನಾಗ ಮೂರ್ತಿ ಮಾಡುವ ಸಂಪ್ರದಾಯವಿದೆ. ಇದು ಹಾವಿನ ಕಾಟದಿಂದ ಮನೆಯನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆಯಿದೆ.
ಭಿನ್ನ ಸಂಸ್ಕೃತಿ, ಆಚರಣೆಗಳಿಗೆ ನೆಲೆಯಾಗಿರುವ ದೇಶ ಭಾರತ. ದೇಶಾದ್ಯಂತ ಭಿನ್ನ ರೀತಿಯಲ್ಲೇ ನಾಗರ ಪಂಚಮಿ ಹಬ್ಬ ಆಚರಣೆ ಮಾಡಲಾಗುತ್ತದೆ. ಮಧ್ಯ ಭಾರತ, ಉತ್ತರ ಮತ್ತು ವಾಯುವ್ಯ ಭಾರತ, ಪಶ್ಚಿಮ ಭಾರತ, ಪೂರ್ವ ಮತ್ತು ಈಶಾನ್ಯ ಭಾರತ, ದಕ್ಷಿಣ ಭಾರತದಲ್ಲಿ ವಿಶಿಷ್ಟ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಹಬ್ಬ ಆಚರಿಸಲಾಗುತ್ತದೆ. ಹಿಂದೆ ಅಖಂಡ ಭಾರತದ ಭಾಗವೇ ಆಗಿದ್ದ ನೇಪಾಳ, ಪಾಕಿಸ್ತಾನದಲ್ಲಿ ಈಗಲೂ ನಾಗರ ಪಂಚಮಿ ಆಚರಿಸುವುದುಂಟು. ಈ ಭಾಗಗಳಲ್ಲಿ ವಿಶಿಷ್ಟ ರೀತಿಯಲ್ಲಿ ನಾಗಾರಾಧನೆ ಮಾಡುವ ಸಂಪ್ರದಾಯವಿದೆ.