ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶಬಿಟ್ಟು ಪಲಾಯನ ಮಾಡಿದ್ದಾರೆ. ಆದರೂ ಬಾಂಗ್ಲಾದಲ್ಲಿ ನಡೆಯುತ್ತಿರುವ ದಾಳಿ ಮುಂದುವರೆದಿದೆ.ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಜನಾಂಗೀಯ ದಾಳಿ ಅಥವಾ ಹಿಂಸೆಗೆ ಪ್ರಚೋದನೆಗೆ ನೀಡುವ ಕೃತ್ಯಗಳನ್ನು ನಾವು ವಿರೋಧಿಸುತ್ತೇವೆ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಹೇಳಿದ್ದಾರೆ.
‘ಇತ್ತೀಚಿನ ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸಬೇಕು ಎನ್ನುವುದನ್ನು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಜನಾಂಗೀಯ ಹಲ್ಲೆ ಅಥವಾ ಜನಾಂಗೀಯ ಹಿಂಸೆಗೆ ಪ್ರಚೋದನೆ ನೀಡುವುದರ ವಿರುದ್ಧ ನಾವಿದ್ದೇವೆ’ ಎಂದು ಕಾರ್ಯದರ್ಶಿಗಳ ಉಪ ವಕ್ತಾರ ಫರ್ಹಾನ್ ಹಖ್ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಪ್ರತಿಭಟನಾಕಾರರು ಹಲವು ಹಿಂದೂ ದೇಗುಲಗಳು ಹಾಗೂ ವ್ಯಾಪಾರ ಕಟ್ಟಡಗಳನ್ನು ಧ್ವಂಸ ಮಾಡಲಾಗಿತ್ತು. ಹಸೀನಾ ಅವರ ಅವಾಮಿ ಲೀಗ್ನ ಹಿಂದೂ ನಾಯಕರನ್ನು ಹತ್ಯೆ ಮಾಡಲಾಗಿತ್ತು. ಹಸೀನಾ ಅವರ ಪಲಾಯನದ ಬಳಿಕ, ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯದ ಹೆಚ್ಚಳವಾಗುತ್ತಿದೆ. ಖ್ಯಾತ ಗಾಯಕ ರಾಹುಲ್ ಅನಂದ್ ಅವರ ನಿವಾಸದ ಮೇಲೂ ದಾಳಿಕೋರರು ದಾಳಿ ನಡೆಸಿದ್ದಾರೆ.