ಕಳೆದ ಕೆಲ ದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿಂಸಾಚಾರಕ್ಕೆ ತಿರುಗಿದೆ. ಘಟನೆಯಲ್ಲಿ 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿಂದ 7,200 ಭಾರತೀಯರು ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ವಿದೇಶಾಂಗ ಇಲಾಖೆ ದಾಖಲೆಗಳ ಪ್ರಕಾರ 19.000 ಭಾರತೀಯರು ಬಾಂಗ್ಲಾದೇಶದಲ್ಲಿ ಇದ್ದರು. ಅದರಲ್ಲಿ 9000 ವಿದ್ಯಾರ್ಥಿಗಳೂ ಸೇರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಮಾಹಿತಿ ನೀಡಿದ್ದಾರೆ.
ಬಾಂಗ್ಲಾದಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಭಾರತಕ್ಕೆ ಬರಲು ಬಯಸುವವರನ್ನು ಹಾಗೂ ಸಂಕಷ್ಟದಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಸರ್ಕಾರ ಸಿದ್ದವಿದೆ ಎಂದಿದ್ದಾರೆ.
ಉದ್ಯೋಗದಲ್ಲಿ ಮೀಸಲು ಕೋಟಾ ವಿರೋಧಿಸಿ ವಿದ್ಯಾರ್ಥಿ ಸಮುದಾಯದ ಪ್ರತಿಭಟನೆಯಿಂದಾಗಿ ಬಾಂಗ್ಲಾದಲ್ಲಿ ಅರಾಜಕತೆ ನಿರ್ಮಾಣವಾಗಿತ್ತು. ಇದರ ಪರಿಣಾಮ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ದೇಶದಿಂದಲೇ ಪಲಾಯನ ಮಾಡಿದ್ದರು.
ಹಿಂಸಾಚಾರದಲ್ಲಿ ಇದುವರೆಗೆ 560 ಮಂದಿ ಮೃತಪಟ್ಟಿದ್ದಾರೆ. ಹಸೀನಾ ನೇತೃತ್ವದ ಸರ್ಕಾರ ಪತನದ ಬಳಿಕವೂ ದೇಶದಾದ್ಯಂತ ಭುಗಿಲೆದ್ದ ಹಿಂಸಾಚಾರದಲ್ಲಿ 232 ಮಂದಿ ಮೃತಪಟ್ಟಿದ್ದಾರೆ.
ಇನ್ನೊಂದೆಡೆ ಬಾಂಗ್ಲಾದೇಶದ ನೂರಾರು ನಾಗರಿಕರು ಆಶ್ರಯ ಕೋರಿ ಭಾರತಕ್ಕೆ ವಲಸೆ ಬರಲು ಸಿದ್ಧರಾಗಿದ್ದು, ಪಶ್ಚಿಮ ಬಂಗಾಳ ಜಿಲ್ಲೆಯ ಜಲಪಾಯಿಗುರಿ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಬಾಂಗ್ಲಾದ ಗಡಿಯಲ್ಲಿ ಗುಂಪುಗೂಡುತ್ತಿದ್ದಾರೆ.