ಇತ್ತೀಚಿನ ದಿನಗಳಿಂದ ಗಂಡ-ಹೆಂಡತಿ ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡೋದು ಕಾಮನ್ ಆಗಿದೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ದಂಪತಿಗಳು ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ.ಅಂತೆಯೇ ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ಗಂಡ – ಹೆಂಡತಿ ಜಗಳ ಊಟದ ಹೊತ್ತಲ್ಲೇ ಶುರುವಾಗಿದ್ದು ಇದರಿಂದ ಹೆಂಡತಿ ಜೈಲು ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರತೀಯ ಮೂಲದ ಈ ದಂಪತಿಯ ಜಗಳ ಪೊಲೀಸ್ ಠಾಣೆ, ಕೋರ್ಟು ಕಚೇರಿ ಮೆಟ್ಟಿಲೇರಿ ಕೊನೆಗೆ ಹೆಂಡತಿ ಜೈಲು ಪಾಲಾಗಿದ್ದಾರೆ. 5 ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿ, ಊಟದ ವಿಚಾರಕ್ಕೆ ಹೊಡೆದಾಡಿಕೊಂಡಿದ್ದಾರೆ.
ಭಾರತೀಯ ಮೂಲದ 34 ವರ್ಷ ವಯಸ್ಸಿನ ಇಶಾ ಪೆರ್ಸಾದ್ ಜೈಲು ಸೇರಿದ್ದ ಮಹಿಳೆ. ಸೇಂಟ್ ಪೀಟರ್ಸ್ಬರ್ಗ್ ಪೊಲೀಸರು ಆಕೆಯನ್ನು ಬಂಧಿಸಿದ ಬಳಿಕ ವಿಚಾರಣೆ ನಡೆಸಿದ ನ್ಯಾಯಾಲಯ, ಆಕೆಗೆ ಎಚ್ಚರಿಕೆ ನೀಡಿ ಜಾಮೀನು ನೀಡಿದೆ. ಅದೂ ಕೂಡಾ ಗಂಡ ಮೇಲೆ ‘ಬುರ್ರಿಟೋ’ ಎಸೆದ ಆರೋಪದ ಮೇಲೆ ಆಕೆ ಜೈಲು ಸೇರುವಂತಾಗಿದೆ. ವೆಜ್ ರೋಲ್ ಅಥವಾ ಚಿಕನ್ ಶವರ್ಮಾ ರೋಲ್ ಮಾದರಿಯಲ್ಲಿ ಇರುವ ಬುರ್ರಿಟೋ ಎಸೆದು ಹಲ್ಲೆ ಮಾಡಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇಶಾ ಪೆರ್ಸಾದ್ ಹಾಗೂ ಆಕೆಯ ಪತಿ ದಂತ ವೈದ್ಯ ಶಿವ ಪೆರ್ಸಾದ್ ಇಬ್ಬರೂ ವೀಕೆಂಡ್ ಪಾರ್ಟಿ ಮಾಡುತ್ತಿದ್ದರು. ಶಿವ ಪೆರ್ಸಾದ್ ಹುಟ್ಟುಹಬ್ಬ ಕೂಡಾ ಇತ್ತು. ಹೀಗಾಗಿ ದಂಪತಿ ತಮ್ಮ ಮನೆಯಲ್ಲೇ ವೀಕೆಂಡ್ ಪಾರ್ಟಿ ಮಾಡಿದ್ದರು. ಆದರೆ ಹೆಂಡತಿ ಭಾರತೀಯ ಮೂಲದ ಅಡುಗೆಯನ್ನು ಮನೆಯಲ್ಲೇ ಮಾಡದೆ ಹೋಟೆಲ್ನಿಂದ ಊಟ ತರಿಸಿದ್ದಳು!
ಟಾಕೋ ಬೆಲ್ ಹಾಗೂ ಮೆಕ್ ಡೊನಾಲ್ಡ್ಸ್ನಿಂದ ಊಟ ಆರ್ಡರ್ ಮಾಡಿದ್ದ ಪತ್ನಿ, ತನ್ನ ಪತಿಗೆ ಕೊಟ್ಟಳು. ಇದರಿಂದ ಸಿಟ್ಟಿಗೆದ್ದ ಪತಿ ತನ್ನ ಹೆಂಡತಿ ಜೊತೆ ಜಗಳ ಮಾಡಲು ಆರಂಭಿಸಿದ. ಬಾಯಿ ಮಾತಿನಲ್ಲಿ ಇದ್ದ ಜಗಳ, ಬಡಿದಾಟದ ಹಂತಕ್ಕೆ ಹೋಯ್ತು. ಈ ವೇಳೆ ಹೆಂಡತಿ ‘ಬುರ್ರಿಟೋ’ ತೆಗೆದುಕೊಂಡು ಗಂಡನ ಮುಖದ ಮೇಲೆ ಎಸೆದಿದ್ದಾಳೆ
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದ ವೇಳೆ ಗಂಡನ ಮುಖದ ಮೇಲೆ ‘ಬುರ್ರಿಟೋ’ ಬಿದಿತ್ತು ಜೊತೆಯಲ್ಲೇ ಮತ್ತೊಂದು ತಿನಿಸು ಸಾಫ್ಟ್ ಶೆಲ್ ಟಾಕೋ ಕೂಡಾ ಗಂಡನ ಮೈ ಮೇಲೆ ಬಿದ್ದಿತ್ತು. ಪೊಲೀಸರು ಬಂದು ನೋಡಿದಾಗ ಗಂಡನ ಮುಖದ ಮೇಲೆ ‘ಬುರ್ರಿಟೋ’ ಹಾಗೆಯೇ ಇತ್ತು. ಆದರೆ ಆತನಿಗೆ ಯಾವುದೇ ಗಾಯಗಳೂ ಆಗಿರಲಿಲ್ಲ. ಇಷ್ಟಾದರೂ ಪೊಲೀಸರು ಪತ್ನಿಯನ್ನು ಆ ಕೂಡಲೇ ಬಂಧಿಸಿದ್ದರು!
ಪತ್ನಿ ಇಶಾ ಪ್ರಕಾರ ಆಕೆಯ ಗಂಡ ಶಿವ ಪೆರ್ಸಾದ್ ಆಕೆಯ ಮೇಲೆ ಬ್ಯಾಗ್ ಎಸೆದನಂತೆ. ಹೀಗಾಗಿ ಆಕೆ ತನ್ನ ಗಂಡನ ಮೇಲೆ ‘ಬುರ್ರಿಟೋ’ ಎಸೆದಳಂತೆ. ಆದರೆ ಗಂಡ ಬ್ಯಾಗ್ ಎಸೆದ ಆರೋಪಕ್ಕೆ ಪೊಲಿಸರಿಗೆ ಯಾವುದೇ ಸಾಕ್ಷ್ಯ ಸಿಕ್ಕಿರಲಿಲ್ಲ. ಹೀಗಾಗಿ, ಆಕೆಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.