ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಗೆ ಬಂದಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಭೀಮನಿಗೆ ಅಭಿಮಾನಿಗಳು ಫುಲ್ ಮಾರ್ಕ್ ನೀಡಿದ್ದಾರೆ. ಯುವ ಪೀಳಿಗೆ ಯಾವ ರೀತಿಯಲ್ಲಿ ಹಾದಿತಪ್ಪುತ್ತಾರೆ ಅನ್ನೋದನ್ನ ಭೀಮ ಸಿನಿಮಾದಲ್ಲಿ ಹೇಳಲಾಗಿದೆ. ಇದೀಗ ದುನಿಯಾ ವಿಜಯ್ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ.
ಭೀಮ ಸಿನಿಮಾ ಮೂಲಕ ಡ್ರಗ್ಸ್ ಬಗ್ಗೆ ದುನಿಯಾ ವಿಜಯ್ ದನಿ ಎತ್ತಿದ್ದಾರೆ. ರಾಜ್ಯದಲ್ಲಿ ಎಗ್ಗಿಲ್ಲದೆ ಡ್ರಗ್ಸ್ ಮಾಫಿಯಾ ನಡೀತಿದ್ಯಂತೆ, ಈ ಬಗ್ಗೆ ಸಿನಿಮಾ ಮೂಲಕ ಎಚ್ಚರಿಸಲು ದುನಿಯಾ ವಿಜಯ್ ಹೊರಟಿದ್ದಾರೆ. ಇದರ ಬಗ್ಗೆ ಎಲ್ಲಾ ದಾಖಲೆ ಇದೆ. ಯಾರೂ ಇದರ ಬಗ್ಗೆ ಮಾತಾಡ್ತಿಲ್ಲ. ಇದರ ವಿರುದ್ಧ ಯಾರೂ ಕ್ರಮ ಕೈಗೊಳ್ತಾ ಇಲ್ಲ. ಕೊನೆಗೆ ಸಿನಿಮಾ ಮೂಲಕ ಜಾಗೃತಿ ಮೂಡಿಸೋಕೆ ಬಂದೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಈ ಇಂಟರ್ ವ್ಯೂವ್ ಬಳಿಕ ಅವರೆಲ್ಲಾ ಎಚ್ಚೆತ್ತುಕೊಳ್ತಾರೆ. ಇನ್ನೊಂದು ವಾರ ಯಾವುದೂ ನಡೆಯೋಲ್ಲ. ಆದ್ರೆ ರೇಟ್ ಜಾಸ್ತಿ ಮಾಡ್ತಾರೆ. 10 ಇರೋ ಮಾತ್ರೆಗಳು 5 ಸಾವಿರಕ್ಕೆ ಸೇಲಾದ್ರೂ ಅಚ್ಚರಿ ಇಲ್ಲ. ಈ ಬಗ್ಗೆ ಪೊಲೀಸ್ ಡಿಪಾರ್ಟ್ಮೆಂಟ್ ಕೇಳಿದ್ರೆ ಎಲ್ಲಾ ದಾಖಲೆ ಕೊಡ್ತೀನಿ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಭೀಮ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈ ಚಿತ್ರವನ್ನು ಎಲ್ಲರೂ ನೋಡಬೇಕು. ಅದರಲ್ಲೂ ಈ ಸಿನಿಮಾ ನೋಡಿದ ಮೇಲೆ ಈ ಚಿತ್ರದಲ್ಲಿ ನಾನು ಹೇಳಲು ಹೊರಟಿರುವ ವಿಚಾರದ ಮೇಲೆ ಮಾಧ್ಯಮಗಳು ಹೆಚ್ಚು ಬೆಳಕು ಚೆಲ್ಲುವ ಮೂಲಕ ಸರ್ಕಾರದ ಗಮನ ಸೆಳೆದು, ಮನೆ ಮನೆಗೂ ಬಂದು ಕೂತಿರುವ ಈ ಸೂಕ್ಷ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಸೆನ್ಸಾರ್ನಿಂದ ಎ ಸರ್ಟಿಫಿಕೇಟ್ ನೀಡಿದ್ದಾರೆ. ಆದರೂ ಎಲ್ಲಾ ವಯಸ್ಸಿನವರು ನೋಡಬೇಕಾದ ಕತೆ ಈ ಚಿತ್ರದಲ್ಲಿದೆ. ವಿದ್ಯಾರ್ಥಿಗಳು, ಹದಿಹರೆಯದವರು, ಅದರಲ್ಲೂ ಹೆಣ್ಣು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಇದು’ ಎಂದರು.