ಬೆಂಗಳೂರು: ಯುಜಿ ನೀಟ್-2024ಕ್ಕೆ ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ‘ಎ’ ಮತ್ತು ಕ್ಲಾಸ್ ‘ವೈ’ ಅಭ್ಯರ್ಥಿಗಳಿಗೆ ಪರಿಶೀಲನಾ ಪತ್ರವನ್ನು (ವೆರಿಫಿಕೇಶನ್ ಸ್ಲಿಪ್) ಪ್ರಾಧಿಕಾರದ ವೆಬ್ಸೈಟಿನ ಸೂಕ್ತ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಸೂಚಿಸಿದೆ.
ಒಂದು ವೇಳೆ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳು ಯುಜಿ ನೀಟ್- 24ಕ್ಕೆ ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದು, ಎನ್ ಆರ್ ಐ-ವಾರ್ಡ್ ಎಂದು ಕ್ಲೇಮ್ ಮಾಡಿದ್ದಲ್ಲಿ ಅಥವಾ ಪ್ರವರ್ಗ 2ರಿಂದ ಪ್ರವರ್ಗ 8ರ ಅಡಿಯಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕ್ಲೇಮ್ ಮಾಡಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಜಿ ನೀಟ್-2024ಕ್ಕೆ ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಒ ಅಭ್ಯರ್ಥಿಗಳು ಹಾಗೂ ಒಸಿಐ ಪಿಐಒ ಎನ್ಆರ್ಐ ವಿದೇಶ ಪ್ರಜೆ ಅಭ್ಯರ್ಥಿಗಳು ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ದಾಖಲೆಗಳ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳ ಬಗ್ಗೆ ತಿಳಿಯಲು ಯುಜಿ ನೀಟ್-2024 ಮಾಹಿತಿ ಪುಸ್ತಕ ನೋಡಬಹುದು ಎಂದು ಹೇಳಲಾಗಿದೆ. ಆ.7ರಿಂದ 9ರವರೆಗೆ ನಡೆದ ದಾಖಲಾತಿ ಪರಿಶೀಲನೆಗೆ ಹಾಜರಾಗದಿದ್ದವರು ಕೂಡ ಈ ಮೇಲಿನ ದಿನಗಳಂದು ಭೇಟಿ ಕೊಡಬಹುದು ಎಂದು ತಿಳಿಸಲಾಗಿದೆ.