ತಮಿಳು ನಟ ಹಾಗೂ ನಿರ್ದೇಶಕ ರಂಜಿತ್ ವಿವಾದಾತ್ಮಕ ಹೇಳಿಕೆ ನೀಡಿದ್ದರೆ. ಅಂತರ್ ಜಾತಿ ಪ್ರೇಮ ಅಥವಾ ವಿವಾಹ ನಡೆದರೆ ಪಾಲಕರು ನಡೆಸುವ ಮರ್ಯಾದ ಹತ್ಯೆ ಯನ್ನು ರಂಜಿತ್ ಸಮರ್ಥಿಸಿಕೊಂಡಿದ್ದಾರೆ. ರಂಜಿತ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಕಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ರಂಜಿತ್ ಅವರು ‘ಕವುಂದಂಪಾಲಾಯಂ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 9ರಂದು ತಮಿಳುನಾಡಿನ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಪ್ರೇಕ್ಷಕರ ಜೊತೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ ಬಳಿಕ ರಂಜಿತ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮರ್ಯಾದಾ ಹತ್ಯೆಯ ಪರವಾಗಿ ರಂಜಿತ್ ಮಾತನಾಡಿದ್ದಾರೆ.
‘ತಂದೆ-ತಾಯಿಗೆ ಮಾತ್ರ ಆ ನೋವು ಏನು ಎಂಬುದು ಗೊತ್ತು. ಒಂದು ಬೈಕ್ ಕಳೆದುಹೋದರೆ ಏನಾಯಿತು ಅಂತ ನಾವು ನೋಡಲು ಹೋಗುವುದಿಲ್ಲವೇ? ಅದೇ ರೀತಿ ಮಕ್ಕಳನ್ನೇ ಜೀವನ ಎಂದುಕೊಂಡ ಪಾಲಕರು ಕೂಡ ಸಿಟ್ಟು ತೋರಿಸುತ್ತಾರೆ. ಅದು ಹಿಂಸೆ ಅಲ್ಲವೇ ಅಲ್ಲ. ಮಕ್ಕಳ ಬಗ್ಗೆ ಅವರು ತೋರಿಸುವ ಕಾಳಜಿ ಅದು’ ಎಂದು ರಂಜಿತ್ ಹೇಳಿದ್ದಾರೆ. ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಈ ಹಿಂದೆ ಕೂಡ ಮಹಿಳೆಯರ ಕುರಿತು ಅವಹೇಳಾನ ಹೇಳಿಕೆ ನೀಡಿ ರಂಜಿತ್ ವಿವಾದಕ್ಕೆ ಕಾರಣವಾಗಿದ್ದರು. ಈಗ ಅವರು ಮರ್ಯಾದಾ ಹತ್ಯೆ ಬಗ್ಗೆ ಮಾತನಾಡಿರುವುದಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ‘ನೀವು ಕೇವಲ ತಪ್ಪಾದ ಹೇಳಿಕೆಗಳನ್ನು ನೀಡುತ್ತಿಲ್ಲ, ಇಡೀ ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.