ಬೆಂಗಳೂರು: ಕಾಫಿ ಶಾಪ್ ವಾಶ್ ರೂಂನಲ್ಲಿ ಮೊಬೈಲ್ ಕ್ಯಾಮರಾ ಆನ್ ಮಾಡಿಟ್ಟಿದ್ದ ಆರೋಪಿಯನ್ನು ಸದಾಶಿವ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರಾವತಿ ಮೂಲದ ಮನೋಜ್ ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಸೆಂಟರಲ್ಲಿ ನಡೆದಿದ್ದ ಘಟನೆಯಾಗಿದೆ. ಬಂಧಿತ ಆರೋಪಿ ಕಳೆದ ಒಂದೂವರೆ ವರ್ಷದಿಂದ ಕಾಫಿ ಶಾಪಲ್ಲಿ ಕೆಲಸ ಮಾಡಿಕೊಂಡಿದ್ದನು. ಮಹಿಳೆಯೊಬ್ಬರು ಕಾಫಿ ಶಾಪ್ ಗೆ ತೆರಳಿದ್ದರು.
ಶೌಚಾಲಯಕ್ಕೆ ಹೋದ ವೇಳೆ ಕಸದ ಬುಟ್ಟಿಯಲ್ಲಿ ಮೊಬೈಲ್ ಇರುವುದನ್ನು ಗಮನಿಸಿದ್ದರು. ಮೊಬೈಲ್ ತೆಗೆದು ನೋಡಿದಾಗ ಏರೋಪ್ಲೇನ್ ಮೋಡ್ ಗೆ ಹಾಕಿ ಕ್ಯಾಮರಾ ಆನ್ ಮಾಡಿ ಇಡಲಾಗಿತ್ತು. ಕ್ಯಾಮೆರಾ ಕಂಡೊಡನೆ ಗಾಬರಿಯಾದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೃತ್ಯದ ಸ್ಥಳಕ್ಕಾಗಮಿಸಿದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜತೆಗೆ ಭದ್ರಾವತಿ ಮೂಲದ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.