ಪ್ರತಿವರ್ಷ ಆಗಸ್ಟ್ 12 ರಂದು ಅಂತರಾಷ್ಟ್ರೀಯ ಯುವ ದಿನವನ್ನು ಆಚರಣೆ ಮಾಡಲಾಗುತ್ತದೆ. ಜಗತ್ತಿನ್ನಲ್ಲಿ ಎಲ್ಲಾ ವಿಭಾಗದಲ್ಲಿ ದುಡಿಯುವ ಕೈಗಳಲ್ಲಿ ಪ್ರಮುಖವಾಗಿ ಯುವ ಜನಾಂಗಕ್ಕೆ ಆದ್ಯತೆ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹ ದುಡಿಯುವ ಕೈಗಳಿಗೆ ಉದ್ಯೋಗ ಸಿಗುವುದು ಕಷ್ಟವಾಗಿದೆ.
ಈ ಹಿನ್ನಲೆಯಲ್ಲಿ ಸ್ಥಳೀಯ ಸರ್ಕಾರಗಳು ಯುವಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ.
ಯುವಕರ ಸಮಸ್ಯೆಗಳು, ಸೇರಿ ಹಲವು ಪ್ರಮುಖ ಉದ್ದೇಶಗಳನ್ನಿಟ್ಟುಕೊಂಡು ಪ್ರತಿವರ್ಷ ಆಗಸ್ಟ್ 12 ರಂದು ಅಂತರಾಷ್ಟ್ರೀಯ ಯುವ ದಿನವನ್ನು ಆಚರಣೆ ಮಾಡಲಾಗುತ್ತದೆ. ಹೆಸರೇ ಸೂಚಿಸುವಂತೆ, ವಿಶ್ವಾದ್ಯಂತ ಯುವಜನರು ಕೈಗೊಂಡ ಉಪಕ್ರಮಗಳು ಮತ್ತು ಕ್ರಿಯೆಗಳಿಗೆ ಧ್ವನಿ ನೀಡಿದ ಈ ದಿನವನ್ನು ಅಂತರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಯುವ ದಿನವನ್ನು ಯಾವಾಗಿನಿಂದ ಆಚರಿಸಲಾಗುತ್ತಿದೆ:
17 ಡಿಸೆಂಬರ್ 1999 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆಗಸ್ಟ್ 12ರಂದು ಅಂತರಾಷ್ಟ್ರೀಯ ಯುವದಿನವನ್ನು ಆಚರಿಸಲು ನಿರ್ಧರಿಸಲಾಯಿತು. 1998ರಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ನೀಡಿದ ಸಲಹೆಗಳನ್ನು ಅನುಸರಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಿರ್ಧಾರದ ನಂತರ 12 ಆಗಸ್ಟ್ 2000ರಿಂದ ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಯುವ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
1999 ರಲ್ಲಿ ಮೊದಲ ಬಾರಿಗೆ ಆಚರಣೆ
ಅಂತರಾಷ್ಟ್ರೀಯ ಯುವ ದಿನವನ್ನು ಮೊದಲ ಬಾರಿಗೆ 1999 ರಲ್ಲಿ ಆಚರಿಸಲಾಯಿತು. ಯುವಜನರನ್ನು ಅರ್ಥಪೂರ್ಣ ಚರ್ಚೆ ಮತ್ತು ಭವಿಷ್ಯದ ಬಗ್ಗೆ ಚರ್ಚೆಯಲ್ಲಿ ತೊಡಗಿಸುವುದನ್ನು ಒಳಗೊಂಡಿರುವ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಅಂತರಾಷ್ಟ್ರೀಯ ಯುವ ದಿನ ಒಳಗೊಂಡಿರುತ್ತದೆ. ಯುವ ಜನರು ಪ್ರಪಂಚದಾದ್ಯಂತ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಅಂತರಾಷ್ಟ್ರೀಯ ಯುವ ದಿನವನ್ನು ಆಚರಣೆಗೆ ನಿರ್ಧರಿಸಲಾಯಿತು.
ಅಂತರಾಷ್ಟ್ರೀಯ ಯುವ ದಿನವನ್ನು ಆಚರಿಸಲು ಕಾರಣವೇನು?
ಅಂತರಾಷ್ಟ್ರೀಯ ಮಟ್ಟದಲ್ಲಿ ಯುವದಿನವನ್ನು ಆಚರಿಸುವ ಉದ್ದೇಶವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಷಯಗಳಲ್ಲಿ ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು, ಯುವಕರಿಗೆ ‘ಅವರ ಪ್ರಾಮುಖ್ಯತೆಯನ್ನು ತಿಳಿಸುವುದು, ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಯುವಕರನ್ನು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಯುವ ದಿನವನ್ನು ಹೇಗೆ ಆರಿಸಲಾಗುತ್ತದೆ:
ಪ್ರತಿವರ್ಷ ಅಂತರಾಷ್ಟ್ರೀಯ ಯುವ ದಿನವನ್ನು ಆಚರಿಸಲು ಮೊದಲು ಥೀಮ್ ಬಿಡುಗಡೆ ಮಾಡಲಾಗುತ್ತದೆ. ಆ ವಿಷಯದ ಆಧಾರದ ಮೇಲೆ ವಿಶ್ವಸಂಸ್ಥೆಯು ಯುವಕರಿಗೆ ಭಾಗವಹಿಸಲು ಅವಕಾಶ ನೀಡುವ ಕಾರ್ಯಕ್ರಮವನ್ನು ನಡೆಸುತ್ತದೆ. ಈ ದಿನದಂದು ದೇಶ ಮತ್ತು ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಭಾಗವಹಿಸುತ್ತವೆ. ಯುವಜನರನ್ನು ಮುಖ್ಯವಾಹಿನಿಯೊಂದಿಗೆ ಹೇಗೆ ಸಂಪರ್ಕಿಸುವುದು ಮತ್ತು ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಅವರ ಸಕಾರಾತ್ಮಕ ಶಕ್ತಿಯನ್ನು ಬಳಸುವುದು ಹೇಗೆ ಎಂಬುದರ ಚರ್ಚೆಯನ್ನು ನಡೆಸಲಾಗುತ್ತದೆ.
ಇಲ್ಲಿ ಯುವಕರ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು ಮುಖ್ಯವಾಗಿ ಚರ್ಚೆಯ ವಿಷಯವಾಗಿದ್ದು, ಕ್ರೀಡೆ, ಸಂಗೀತ, ನೃತ್ಯ, ಬರವಣಿಗೆ ಮುಂತಾದ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಯುವಕರನ್ನು ಪ್ರೋತ್ಸಾಹಿಸಿ ಗೌರವಿಸಲಾಗುತ್ತದೆ. ಇದು ಅವರಿಗೆ ಇನ್ನೂ ಹೆಚ್ಚು ಸಾಧಿಸಲು ಹುಮ್ಮಸ್ಸು ನೀಡುತ್ತದೆ ಮತ್ತು ಅವರನ್ನು ನೋಡಿದವರು ಅವರಿಂದ ಸ್ಪೂರ್ತಿ ಪಡೆದು ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಾರೆ.