ವೀಳ್ಯದೆಲೆ ಎಂದರೆ ಅದರ ಬಗ್ಗೆ ಗ್ರಾಮಾಂತರ ಪ್ರದೇಶದ ಜನರಿಗೆ ಹೆಚ್ಚಿಗೆ ವಿವರಿಸಬೇಕೆಂದಿಲ್ಲ. ಅದೇ ನಗರ ವಾಸಿಗಳು ಕೂಡ ಪಾನ್ ಶಾಪ್ ಗಳಲ್ಲಿ ಇದನ್ನು ನೋಡಿರಬಹುದು. ಪಾನ್ ಶಾಪ್ ಗಳಲ್ಲಿ ಸಿಗುವಂತಹ ವೀಳ್ಯದೆಲೆಯು ಒಂದು ರೀತಿಯ ಹೈಬ್ರೀಡ್ ಎಲೆ ಎನ್ನಬಹುದು. ದೇಶೀಯ ವೀಳ್ಯದೆಲೆಯಲ್ಲಿ ಹೆಚ್ಚಿನ ಔಷಧೀಯ ಗುಣಗಳು ಇವೆ ಎಂದು ಹೇಳಲಾಗುತ್ತದೆ.
ಭಾರತೀಯರು ಆಯುರ್ವೇದದಲ್ಲಿ ವಿವಿಧ ರೀತಿಯ ಚಿಕಿತ್ಸೆಗೆ ಇದನ್ನು ಬಳಸಿಕೊಂಡು ಬಂದಿದ್ದಾರೆ
ಆಂಟಿ ಆಕ್ಸಿಡೆಂಟ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವಂತಹ ವೀಳ್ಯದೆಲೆಯು ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು, ಹಲ್ಲಿನ ಆರೋಗ್ಯ ಕಾಪಾಡುವುದು, ಗಾಯ ಗುಣಪಡಿಸುವುದು ಮತ್ತು ಮಧುಮೇಹ ನಿಯಂತ್ರಣದಲ್ಲಿ ಇಡುವುದು.
ಕ್ಯಾಲ್ಸಿಯಂ ಅಂಶ ಹೆಚ್ಚಿರುವ ವೀಳ್ಯದೆಲೆ ತಿನ್ನುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ವೀಳ್ಯದೆಲೆ ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.
ಪುಟ್ಟ ಮಕ್ಕಳಲ್ಲಿ ಹೊಟ್ಟೆ ಉಬ್ಬರ ಉಂಟಾಗಿ ಅಳುತ್ತಿದ್ದರೆ, ವೀಳ್ಯದೆಲೆಗೆ ಹರಳೆಣ್ಣೆ ಸವರಿ ಬೆಚ್ಚಗೆ ಮಾಡಿ ಅದರಿಂದ ಮಗುವಿನ ಹೊಟ್ಟೆಗೆ ಶಾಖ ನೀಡಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ ಗುಣವಾಗುತ್ತದೆ.
ಮಕ್ಕಳಲ್ಲಿ ನೆಗಡಿ, ಕೆಮ್ಮು, ಕಫ ಉಂಟಾದಾಗ ವೀಳ್ಯದೆಲೆಯ ರಸ, ತುಳಸೀರಸ, ದೊಡ್ಡಪತ್ರೆಯ ರಸ ಬೆರೆಸಿ, ಜೇನು ತುಪ್ಪ ಸೇರಿಸಿ ನೀಡಿದರೆ ಶೀಘ್ರ ಗುಣವಾಗುತ್ತದೆ.
ಅಸ್ತಮಾ, ಕೆಮ್ಮು, ಕಫದಿಂದ ಬಳಲುವವರು, ವೀಳ್ಯದೆಲೆಯ ರಸ, ಬಿಳಿ ಈರುಳ್ಳಿಯ ರಸ ಹಾಗೂಜೇನುತುಪ್ಪ ಬೆರೆಸಿ, ಅದರಲ್ಲಿ ಶುದ್ಧ ಇಂಗನ್ನು ಕದಡಿ ದಿನಕ್ಕೆ 3-4 ಬಾರಿ ಸೇವಿಸಿದರೆ ತುಂಬಾ ಪರಿಣಾಮಕಾರಿ.