ಬೆಂಗಳೂರು: 5 ವರ್ಷಗಳ ಲೈಂಗಿಕ ಸಂಬಂಧದ ನಂತರ ಅತ್ಯಾಚಾರ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯ ಆರೋಪದ ವ್ಯಕ್ತಿಯ ವಿರುದ್ಧದ ಆರೋಪವನ್ನು ಬೆಂಗಳೂರಿನ ಹೈಕೋರ್ಟ್ ರದ್ದುಗೊಳಿಸಿದೆ. 5 ವರ್ಷಗಳ ಕಾಲ ಪರಸ್ಪರ ಪ್ರೇಮಿಸಿದ್ದ ಜೋಡಿಗಳು, ಉಭಯ ಸಮ್ಮತಿಯೊಂದಿಗೆ ಲೈಂಗಿಕ ಸಂಬಂಧವನ್ನೂ ಹೊಂದಿದ್ದರು. ಆದರೆ, ಈಗ ತನ್ನ ಪ್ರಿಯಕರ ಮದುವೆ ಮಾಡಿಕೊಳ್ಳಲು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ಯುವತಿ ಆತನ ವಿರುದ್ಧ ಅತ್ಯಾಚಾರ ಹಾಗೂ ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದರು.
ಇದರಂತೆ ಬೆಂಗಳೂರಿನ ವ್ಯಕ್ತಿ 53ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ತನ್ನ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದನ್ನು ಪ್ರಶ್ನಿಸಿದ್ದರು. ಅಲ್ಲದೆ, ತಾವು ಮತ್ತು ದೂರುದಾರರು ಐದು ವರ್ಷಗಳಿಂದ ಪ್ರೀತಿಸುತ್ತಿದ್ದೆವು ಮತ್ತು ಮದುವೆಯಾಗಲು ಬಯಸಿದ್ದೆವು. ಆದರೆ, ಬೇರೆ ಜಾತಿ ಹಿನ್ನೆಲೆ ಮದುವೆ ಸಾದ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಪ್ರಕರಣವನ್ನು ಇತ್ಯರ್ಥಪಡಿಸಿರುವ ಬೆಂಗಳೂರಿನ ಹೈಕೋರ್ಟ್, 5 ವರ್ಷಗಳ ಕಾಲ ಸಮ್ಮತಿಯ ಲೈಂಗಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಆಕೆಯ ಇಷ್ಟದ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆದಿದೆ ಎನ್ನಲಾಗದು, ಇದನ್ನು ಅತ್ಯಾಚಾರ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಬೆಂಗಳೂರಿನ ಹೈಕೋರ್ಟ್ ಹೇಳಿದೆ.