ಬೆಂಗಳೂರು:- ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಲು ನಮ್ಮ ಮೆಟ್ರೋ ಸಜ್ಜಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಬಿಎಂಆರ್ಸಿಎಲ್ ಮುಂದಾಗಿದೆ. ಹೊಸ ಮಾರ್ಗಗಳಾದ ಗೊಟ್ಟಿಗೆರೆಯಿಂದ ನಾಗವಾರ, ಸಿಲ್ಕ್ ಬೋರ್ಡ್ನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬ್ಲೂ ಲೈನ್ನಲ್ಲಿ ಪಿಎಸ್ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರುಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ.
ಹೀಗಿರುವಾಗ ಹಳೆಯ ಮೆಟ್ರೋ ಸ್ಟೇಷನ್ಗಳಿಗೂ ಪಿಎಸ್ಡಿ ಡೋರ್ ಅಳವಡಿಸಲು ಪ್ರಯಾಣಿಕರ ಒತ್ತಡ ಹೆಚ್ಚಾಗಿದೆ.
ಎಲ್ಲಾ ಮೆಟ್ರೋ ಸ್ಟೇಷನ್ಗಳಿಗೂ ಪಿಎಸ್ಡಿ ಅಳವಡಿಸಲು 700 ರಿಂದ 800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಟಿಕೆಟ್ ದರ ಹೆಚ್ಚಿಸುವ ಕುರಿತು ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಸುಳಿವು ನೀಡಿದ್ದಾರೆ.
ಒಂದು ಮೆಟ್ರೋ ಸ್ಟೇಷನ್ಗೆ ಪಿಎಸ್ಡಿ ಅಳವಡಿಸಲು 8 ರಿಂದ 10 ಕೋಟಿ ವೆಚ್ಚವಾಗಲಿದೆ. ಸದ್ಯ ಕಾರ್ಯಾಚರಣೆಯಲ್ಲಿರುವ ಹಸಿರು ಮತ್ತು ನೇರಳೆ ಮಾರ್ಗದ ಎಲ್ಲಾ ಮೆಟ್ರೋ ಸ್ಟೇಷನ್ಗಳಿಗೆ ಪಿಎಸ್ಡಿ ಅಳವಡಿಸಲು ಸುಮಾರು 700 ರಿಂದ 800 ಕೋಟಿ ರೂಪಾಯಿ ಆಗಲಿದೆ ಎಂದರು.
ಬ್ಯಾಂಕ್ನಲ್ಲಿ ಸಾಲ ಪಡೆದುಕೊಂಡರೆ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಾಗುತ್ತದೆ. ಅದನ್ನು ಪ್ರಯಾಣಿಕರ ಮೇಲೆ ಹೊರೆ ಹಾಕಬೇಕಾಗುತ್ತದೆ. ಹಾಗಾಗಿ ಟಿಕೆಟ್ ದರ ಏರಿಕೆ ಮಾಡಿದರೆ ಪಿಎಸ್ಡಿಗೆ ಬೇಕಾದ ಹಣ ಹೊಂದಿಸಲು ಸರಿ ಆಗುತ್ತದೆ ಎನ್ನುವುದು ನಮ್ಮ ಮೆಟ್ರೋ ಯೋಚನೆ. ಆದರೆ ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಕೇಳಿ ಪಿಎಸ್ಡಿ ಹಾಕಿ, ಅದನ್ನು ಬಿಟ್ಟು ಪ್ರಯಾಣಿಕರ ಮೇಲೆ ಹೊರೆ ಹಾಕುವುದು ಸರಿಯಲ್ಲ ಎಂದು ಪ್ರಯಾಣಿಕ ಪ್ರಸಾದ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.