ಸ್ಯಾಂಡಲ್ ವುಡ್ ಸಿನಿಮಾ ರಂಗದ ಏಳಿಗೆಗಾಗಿ ಇಂದು ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ, ಹೋಮ, ಹವನ ನಡೆಯುತ್ತಿದೆ. ಈ ಪೂಜೆಯಲ್ಲಿ ಕನ್ನಡ ಸಿನಿಮಾ ರಂಗದ ಸಾಕಷ್ಟು ಮಂದಿ ಭಾಗಿಯಾಗಿದ್ದಾರೆ. ನಾಗಾರಾಧನೆ ವೇಳೆ ಹಿರಿಯ ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿರುವ ಘಟನೆ ನಡೆದಿದೆ
ನಾಗಾರಾಧನೆ ನಡೆಯುತ್ತಿದ್ದ ವೇಳೆ, ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಕೂಡಲೇ ಅವರಿಗೆ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ, “ನನಗೆ ಆಗಾಗ ಈ ರೀತಿ ಆಗುತ್ತದೆ. ಏನಾಯ್ತು ಅಂತ ಗೊತ್ತು ಆಗೋದಿಲ್ಲ. ಆಗೆಲ್ಲ ದೇವರ ತೀರ್ಥ ಕೊಟ್ಟಾಗ ಸರಿ ಹೋಗುತ್ತದೆ. ನಾಲ್ಕೈದು ಜನ ನನ್ನನ್ನು ಹಿಡಿಯಬೇಕಾಗುತ್ತದೆ. ಮನೆಯಲ್ಲಿಯೂ ಈ ರೀತಿ ಆಗುತ್ತದೆ” ಎಂದಿದ್ದಾರೆ.
ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ಉಡುಪಿಯ ಪ್ರಕಾಶ್ ಅಮ್ಮಣ್ಣಾಯ ನೇತೃತ್ವದಲ್ಲಿ ಈ ಪೂಜೆ ನಡೆಯುತ್ತಿದೆ. ನೆನಪಿರಲಿ ಪ್ರೇಮ್-ಜ್ಯೋತಿ, ಅಭಿಷೇಕ್ ಅಂಬರೀಶ್, ದೊಡ್ಡಣ್ಣ ದಂಪತಿ, ಪದ್ಮಾ ವಾಸಂತಿ, ಜ್ಯೋತಿ ಬಂಟ್ವಾಳ ಮುಂತಾದ ಹಿರಿಯ ನಟ, ನಟಿಯರು ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ನಟ, ನಟಿಯರು, ನಿರ್ದೇಶಕರು, ಸಂಗೀತ ಸಂಯೋಜಕರು, ನಿರ್ಮಾಪಕರು, ತಾಂತ್ರಿಕ ವರ್ಗ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಈ ಹೋಮದಲ್ಲಿ ಭಾಗಿಯಾಗಿದ್ದಾರೆ.