ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ.
ವರಲಕ್ಷ್ಮಿ ಪೂಜೆಯನ್ನು ಸಾಮಾನ್ಯವಾಗಿ ತಮ್ಮ ಅತ್ತೆಯಿಂದ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದ ಮಹಿಳೆಯರು ಮಾಡುತ್ತಾರೆ. ಆದ್ದರಿಂದ, ಇದು ಒಂದು ತಲೆಮಾರಿನಿಂದ ಇನ್ನೊಂದು ಪೀಳಿಗೆಗೆ ಮುಂದುವರಿಯುವ ಪದ್ಧತಿ.
ವರಲಕ್ಷ್ಮಿ ವ್ರತವನ್ನು ಮಾಡುವವರು ಬೆಳ್ಳಿಯ ಅಥವಾ ಇನ್ಯಾವುದೇ ಲೋಹದಿಂದ ತಯಾರಿಸಿದ ಲಕ್ಷ್ಮಿ ದೇವಿಯ ಮುಖವನ್ನು ಬಳಸುತ್ತಾರೆ. ಪೂಜೆಯ ಸಮಯದಲ್ಲಿ ಇದನ್ನು ವರ್ಷದಿಂದ ವರ್ಷಕ್ಕೆ ಬಳಸಲಾಗುತ್ತದೆ.
ಮಾವಿನ ಎಲೆಗಳನ್ನು ಬಳಸಿ ತಳಿರು ತೋರಣಗಳಿಂದ ಮನೆಯ ಬಾಗಿಲನ್ನು ಸಿಂಗರಿಸಬೇಕು. ಹೂವಿನ ಮಾಲೆಗಳನ್ನು ಮನೆಯಲ್ಲಿ ಬಾಗಿಲಿಗೆ ಕಟ್ಟಬೇಕು. ಇದರಿಂದಾಗಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.
ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ, ಸುಖಃ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾ ಲಕ್ಶ್ಮೀಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅಂತಹವರ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಇಂದಿನ ದಿನಗಳಲ್ಲಿ ಬಹುತೇಕರು ಸರಸ್ವತಿಗಿಂತ ಲಕ್ಷ್ಮಿಯನ್ನು ಒಲಿಸಿಕೊಳ್ಳಲೇ ಬಯಸುತ್ತಿರುವುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯವಾಗಿದೆ.