ಬೆಂಗಳೂರು ಬಳ್ಳಾರಿ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿ ಬರೋಬ್ಬರಿ 70 ಗಂಟೆ ಕಳೆದಿದೆ. ಇದೀಗ 19ನೇ ಗೇಟ್ ಜಾಗದಲ್ಲಿ ಸ್ಟಾಪ್ಲಾಗ್ ಗೇಟ್ ಅಳವಡಿಕೆ ಪ್ರಯತ್ನಗಳು ನಡೆದಿವೆ.
ಜಲಾಶಯದ ನೀರನ್ನು ಕ್ರಸ್ಟ್ ಗೇಟ್ ಕೆಳಗಿನವರೆಗೂ ಖಾಲಿ ಮಾಡದೇ, ಅದಕ್ಕೂ ಮೊದಲೇ ಸ್ಟಾಪ್ಲಾಗ್ ಗೇಟ್ ಅಳವಡಿಕೆಗೆ ತುಂಗಾಭದ್ರಾ ಬೋರ್ಡ್, ಕರ್ನಾಟಕ ಮತ್ತು ಆಂಧ್ರ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಸ್ಟಾಪ್ ಲಾಗ್ನ 10 ಪುಟಗಳ ನೀಲಿನಕ್ಷೆ ಆಧರಿಸಿ ಸಮರೋಪಾದಿಯಲ್ಲಿ ಐದು ಎಂಜಿನಿಯರಿಂಗ್ ಕಂಪನಿಗಳು ಗೇಟ್ಗಳನ್ನು ನಿರ್ಮಿಸುತ್ತಿವೆ. 20 ಅಡಿ ಎತ್ತರ, 60 ಅಡಿ ಅಗಲ, 48 ಟನ್ ಭಾರದ ಸ್ಟಾಪ್ ಲಾಗ್ಗೇಟನ್ನು ಏಕಕಾಲದಲ್ಲಿ ಡ್ಯಾಂ ಮೇಲೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ತುರ್ತು ಗೇಟನ್ನು ಐದು ಭಾಗಗಳಾಗಿ ತಯಾರಿಸಲಾಗ್ತಿದೆ. ನಂತರ ಇದನ್ನು ಡ್ಯಾಂ ಮೇಲೆ ಕೊಂಡೊಯ್ದು, 18 ಮತ್ತು 19ನೇ ಪಿಯರ್ಗಳ ನಡುವೆ ಹಂತ ಹಂತವಾಗಿ ಎಲಿಮೆಂಟ್ಗಳನ್ನು ಇಳಿಸಿ ತುರ್ತು ಗೇಟ್ ನಿರ್ಮಿಸಲಾಗುತ್ತದೆ.
ಬುಧವಾರ ಈ ಪ್ರಕ್ರಿಯೆ ಆರಂಭ ಆಗಲಿದ್ದು, ತುರ್ತು ಗೇಟ್ ಅಳವಡಿಕೆ ಕೆಲಸ ಮುಗಿಯಲು ಮೂರ್ನಾಲ್ಕು ದಿನ ಹಿಡಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಆಗಸ್ಟ್ 17ರಿಂದ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಅಷ್ಟರೊಳಗೆ ಗೇಟ್ ಅಳವಡಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ. ನೀರಿನಲ್ಲಿಯೇ ಗೇಟ್ ಅಳವಡಿಕೆ ಕಾರ್ಯಕ್ಕೆ ಮುಂದಾಗಿರುವುದು ದೇಶದ ಇತಿಹಾಸಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.
ಈ ಕಾರ್ಯಾಚರಣೆ ನೇತೃತ್ವವನ್ನು ಡ್ಯಾಂ ಗೇಟ್ಗಳ ತಜ್ಞ ಕನ್ನಯ್ಯ ನಾಯ್ಡು ವಹಿಸಿದ್ದಾರೆ. ಮುಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಪಡೆಗಳು ಬೀಡುಬಿಟ್ಟಿವೆ. ಅಂದ ಹಾಗೇ, ಡ್ಯಾಂನಿಂದ ಈಗಾಗಲೇ 30ಕ್ಕೂ ಹೆಚ್ಚು ಟಿಎಂಸಿ ನೀರು ಹೊರಗೆ ಹರಿದಿದೆ. ಇಂದು ಹೊರಹರಿವಿನ ಪ್ರಮಾಣವನ್ನು 1.40 ಲಕ್ಷ ಕ್ಯುಸೆಕ್ಗೆ ಹೆಚ್ಚಿಸಲಾಗಿದೆ.