ಭಾವನಾ ಪಟೇಲ್ ಎಂಬ ಈ ಶಿಕ್ಷಕಿ ಕಳೆದ 8 ವರ್ಷಗಳಿಂದ ಶಾಲೆಗೆ ಹಾಜರಾಗಿಯೇ ಇಲ್ಲ. ಅಸಲಿಗೆ ಆಕೆ ಭಾರತದಲ್ಲಿಯೇ ಇಲ್ಲ. ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಈ ಶಿಕ್ಷಕಿ, ಕಳೆದ 8 ವರ್ಷಗಳಿಂದ ಅಮೆರಿಕದಲ್ಲೇ ನೆಲೆಸಿದ್ದಾರೆ. ಆದರೆ ಭಾರತದಲ್ಲಿ ಪ್ರತಿ ತಿಂಗಳೂ ಸಂಬಳ ಪಡೆಯುತ್ತಲೇ ಇದ್ದಾರೆ!
ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಭಾವನಾ ಪಟೇಲ್, ಶಿಕಾಗೋ ನಗರದಲ್ಲಿ ನೆಲೆಸಿದ್ದಾರೆ. ಆದರೆ, ಶಾಲೆಯ ರೋಸ್ಟರ್ನಲ್ಲಿ ಆಕೆಯ ಹೆಸರು ಇನ್ನೂ ಉಳಿದು ಹೋಗಿದೆ. ಪ್ರತಿ ವರ್ಷ ದೀಪಾವಳಿ ಹಬ್ಬದ ವೇಳೆ ಆಕೆ ಭಾರತಕ್ಕೆ ಬರುತ್ತಾರೆ. ಕೆಲವು ದಿನಗಳ ಕಾಲ ಭಾರತದಲ್ಲೇ ಉಳಿಯುತ್ತಾರೆ. ಈ ವೇಳೆ ಶಾಲೆಗಳಿಗೆ ರಜೆ ಇರುತ್ತದೆ. ಹೀಗಾಗಿ ಶಾಲೆಗೆ ಹೋಗೋದಿಲ್ಲ. ಮಕ್ಕಳ ಜೊತೆ ಚರ್ಚಿಸಿ ಪಾಠ ಕೂಡಾ ಮಾಡೋದಿಲ್ಲ.
ಗುಜರಾತ್ನ ಬನಸ್ಕಾಂತ ಜಿಲ್ಲೆಯ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ಶಿಕ್ಷಕಿ ಭಾವನಾ ಪಟೇಲ್ ಅವರ ಈ ಗೈರು ಹಾಜರಿ ಕುರಿತಾಗಿ ಶಾಲೆಯ ಪ್ರಾಂಶುಪಾಲರು ತಾಲ್ಲೂಕು ಶಿಕ್ಷಣ ಅಧಿಕಾರಿಗಳು, ಜಿಲ್ಲಾ ಶಿಕ್ಷಣ ಅಧಿಕಾರಿಗಳು ಹಾಗೂ ಗುಜರಾತ್ ರಾಜ್ಯದ ಶಿಕ್ಷಣ ಸಚಿವರಿಗೂ ದೂರು ನೀಡಿದ್ದರು ಎನ್ನಲಾಗಿದೆ. ಆದರೆ, ಯಾರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ನೋಟಿಸ್ ನೀಡಲಾಗಿದೆ.
ಮೂಲಗಳ ಪ್ರಕಾರ ಶಿಕ್ಷಕಿ ಭಾವನಾ ಪಟೇಲ್ ಅವರು ಜನವರಿ 2023ರಲ್ಲಿ ಶಾಲೆಗೆ ಭೇಟಿ ನೀಡಿದ್ದರು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಮಾಹಿತಿ ಲಭ್ಯವಾಗಿದೆ. ಇನ್ನು 2024ರ ಆರಂಭದಿಂದ ಸಂಬಳ ರಹಿತ ರಜೆಯಲ್ಲಿ ಇದ್ದಾರೆ ಎಂದೂ ಹೇಳಲಾಗಿದೆ. ಆದಾಗ್ಯೂ ಶಿಕ್ಷಣ ಇಲಾಖೆ ಭಾವನಾ ಪಟೇಲ್ ಅವರಿಗೆ ನೋಟಿಸ್ ನೀಡಿದ್ದು, ಅನಧಿಕೃತ ಗೈರು ಹಾಜರಿಗೆ ಕಾರಣ ಕೇಳಿದೆ. ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.
ಆಘಾತಕಾರಿ ವಿಚಾರವೆಂದರೆ ಶಾಲೆಯ ಪ್ರಾಂಶುಪಾಲರು ಮುನ್ನೆಚ್ಚರಿಕೆ ವಹಿಸಿ ತಾಲ್ಲೂಕು ಮಟ್ಟದ, ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನ ಸೆಳೆಯಲು ಯತ್ನಿಸಿದ್ದಾರೆ. ಗುಜರಾತ್ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಿಗೂ ದೂರು ನೀಡಿದ್ದಾರೆ. ಇಷ್ಟಾದರೂ ಕ್ರಮ ಕೈಗೊಳ್ಳದ ಸರ್ಕಾರ, ಇದೀಗ ಗುಜರಾತ್ನ ಸ್ಥಳೀಯ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿ ಈ ವಿಚಾರ ನಗೆಪಾಟಲಿಗೆ ಈಡಾದ ಬಳಿಕ ಕ್ರಮ ಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.