ಮಂಗಳೂರು: ನಾನು ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ಎಸಗಿಲ್ಲ ಎಂದು ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ದೇವರ ಮುಂದೆ ಪ್ರಮಾಣ ಮಾಡಿದ್ದಾರೆ.
ನಾನು ಒಂದು ರೂಪಾಯಿ ಮುಟ್ಟಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ಒಂದು ವೇಳೆ ತಪ್ಪುಮಾಡಿದ್ದರೆ ತಕ್ಕ ಶಿಕ್ಷೆಯನ್ನು ಮಾರಿಗುಡಿಯ ಮಹಾದೇವಿ ನೀಡಲಿ ಎಂದು ಬೆಳ್ತಂಗಡಿ ಮಾರಿಗುಡಿ ದೇವಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಿಸಿದ್ದರು
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ- ಬೆಳ್ತಂಗಡಿ ಪ್ರವಾಸಿ ಬಂಗಲೆ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಹರೀಶ್ ಪೂಂಜಾ ಭ್ರಷ್ಟಾಚಾರ ಎಸಗಿದ್ದಾರೆ. ಹೆದ್ದಾರಿಯ ಕಾಮಗಾರಿಯಲ್ಲಿ ಶಾಸಕ 3 ಕೋಟಿ ಕಿಕ್ ಬ್ಯಾಕ್ ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಂಡರೂ 2 ಕೋಟಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಮಾಡಿದ್ದಾರೆ ಎಂದು ದೂರಿದ್ದರು
ಮಾರ್ಚ್ 28, 2023 ರಲ್ಲಿ ಬೆಳ್ತಂಗಡಿಲ್ಲಿ ಪ್ರವಾಸಿ ಮಂದಿರ ಉದ್ಘಾಟನೆಯಾಗಿತ್ತು. ಈ ಪ್ರವಾಸಿ ಮಂದಿರ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಪ್ರವಾಸಿ ಮಂದಿರದ ಅನುದಾನವನ್ನು ಚುನಾವಣೆ ಪ್ರಚಾರಕ್ಕೆ ಬಳಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ.
ಇಬ್ಬರ ನಡುವಿನ ವಾಕ್ಸಮರ ಜೋರಾಗುತ್ತಿದ್ದಂತೆ ಇಂದು ಹರೀಶ್ ಪೂಂಜಾ ಅವರು ಮಾರಿಗುಡಿಗೆ ಬಂದು ಪ್ರಮಾಣ ಮಾಡಿದ್ದಾರೆ. ದೇವರಿಗೆ ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆದು ನಾನು ತಪ್ಪು ಮಾಡಿಲ್ಲ. ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ರಕ್ಷಿತ್ ಶಿವರಾಂ ಸೇರಿದಂತೆ ಎಲ್ಲರಿಗೂ ತಕ್ಕ ಶಿಕ್ಷೆ ನೀಡುವಂತೆ ಪ್ರಾರ್ಥಿಸಿಕೊಂಡಿದ್ದಾರೆ.