28 ವರ್ಷದ ಬೆಲ್ಜಿಯಂ ಮಹಿಳೆಯ ಮೇಲೆ ಐದು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ಬಳಿಕ ಆಕೆಯ ಕೈಕಾಲುಗಳನ್ನು ಕಟ್ಟಿ ರಸ್ತೆಗೆ ಎಸೆದು ಹೋದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಇಸ್ಲಾಮಾಬಾದ್ನಲ್ಲಿ ಆಗಸ್ಟ್ 14ರಂದು ಪಾಕಿಸ್ತಾನದ ಸ್ವಾತಂತ್ರ್ಯಾ ದಿನದಂದು ಮಹಿಳೆ ಗಾಯಗೊಂಡ ಸ್ಥಿತಿಯಲ್ಲಿ ರಸ್ತೆಯಲ್ಲಿ ಪತ್ತೆಯಾಗಿದ್ದಳು. ಆಕೆಯ ಕೈಕಾಲುಗಳನ್ನು ಕಟ್ಟಿ ಹಾಕಲಾಗಿದ್ದು, ದೇಹದ ಮೇಲೆ ಗಾಯದ ಗುರುತುಗಳಿದ್ದವು. ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು ಉಳಿದವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಪಾಕಿಸ್ತಾನಿ ಮಾಧ್ಯಮಗಳ ಮಾಹಿತಿ ಪ್ರಕಾರ, ಅತ್ಯಾಚಾರವೆಸಗಿದ ನಂತರ ಮಹಿಳೆಯ ಕೈಗಳನ್ನು ಕಟ್ಟಿ ಇಸ್ಲಾಮಾಬಾದ್ನ ಜಿ-6 ಸೆಕ್ಟರ್ನಲ್ಲಿ ಎಸೆಯಲಾಗಿತ್ತು. ಸಂತ್ರಸ್ತೆಯನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಪೊಲೀಸರು ಆಕೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ತನ್ನನ್ನು ಒತ್ತೆಯಾಳಾಗಿರಿಸಿಕೊಂಡು ಐದು ದಿನಗಳ ಕಾಲ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ಆರೋಪ ದೃಢಪಟ್ಟಿದೆ. ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆರೋಪಿಯನ್ನು ತಮಿಜುದ್ದೀನ್ ಎಂದು ಗುರುತಿಸಲಾಗಿದೆ. ಆರೋಪಿಯು ವಿಚಾರಣೆಯ ಸಮಯದಲ್ಲಿ ಮಹಿಳೆ ಮಾನಸಿಕವಾಗಿ ಅಸ್ಥಿರಳಾಗಿದ್ದಾಳೆ ಮತ್ತು ಆಕೆಯ ಗುರುತು ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿಲ್ಲ ಎಂದು ವಾದಿಸಿದರು. ಹೆಚ್ಚಿನ ತನಿಖೆಗಾಗಿ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.
2023 ರಲ್ಲಿ ಪಾಕಿಸ್ತಾನದಲ್ಲಿ 6,624 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಹೆಚ್ಚಿನ ಘಟನೆಗಳು ಫೈಸಲಾಬಾದ್ನಲ್ಲಿ ನಡೆದಿವೆ. 2017 ಮತ್ತು 2021 ರ ನಡುವೆ ದೇಶಾದ್ಯಂತ 21,900 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ವರದಿ ಮಾಡಿದೆ.