ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವ್ರತವನ್ನು ಸುಮಂಗಲಿಯರು ಬಹಳ ಶ್ರದ್ಧಾ ಭಕ್ತಿಯಿಂದ ಮಾಡುತ್ತಾರೆ. ಹೀಗಾಗಿ ಲಕ್ಷ್ಮೀ ದೇವಿಯನ್ನು ಮನೆಗೆ ಬರ ಮಾಡಿಕೊಳ್ಳಲು ಮನೆಯನ್ನು ಸ್ವಚ್ಛಗೊಳಿಸಿ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ.
ಯಾವುದೇ ಹಬ್ಬವಿರಲಿ, ಮನೆಯ ಅಲಂಕಾರವು ಹಬ್ಬದ ಕಳೆಯನ್ನು ಹೆಚ್ಚಿಸುತ್ತದೆ. ಮನೆಯ ಪ್ರವೇಶದ್ವಾರಕ್ಕೆ ಹೂವು ಹಾಗೂ ತೋರಣಗಳಿಂದ ಅಲಂಕಾರ ಮಾಡುವುದು ಬಹಳ ಮುಖ್ಯ. ಇದು ಮನೆಯಲ್ಲಿ ಹಬ್ಬದ ಕಳೆಯನ್ನು ತಂದು ಕೊಡುತ್ತದೆ.
ವರಮಹಾಲಕ್ಷ್ಮಿ ಹಬ್ಬದ ದಿನ ಮನೆಯ ಪ್ರವೇಶದ್ವಾರಕ್ಕೆ ಮಾವಿನ ತೋರಣವನ್ನು ಕಟ್ಟಿ, ಚೆಂಡು ಹೂವಿನ ಮಾಲೆಯನ್ನು ನೇತು ಹಾಕಿ ಸಿಂಪಲ್ ಆಗಿ ಹಬ್ಬದ ಲುಕ್ ನೀಡಬಹುದು.
ಹೂವಿನ ಅಲಂಕಾರವು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಮನೆಯ ಪ್ರವೇಶದ್ವಾರಕ್ಕೆ ಹಾಗೂ ದೇವರ ಕೋಣೆಯ ಪ್ರವೇಶದ್ವಾರಕ್ಕೆ ಹೂಮಾಲೆಯನ್ನು ಹಾಕಿ ಅಲಂಕರಿಸಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಪ್ಲಾಸ್ಟಿಕ್ ಹೂವುಗಳು ಲಭ್ಯವಿದೆ. ಇದನ್ನು ಕೂಡ ಅಲಂಕಾರಕ್ಕಾಗಿ ಬಳಸಿಕೊಳ್ಳಬಹುದು.
ಹಬ್ಬದ ರಂಗನ್ನು ಹೆಚ್ಚಿಸುವುದೇ ಮನೆ ಮುಂದೆ ಹಾಕುವ ರಂಗೋಲಿ..ಈ ವರಮಹಾಲಕ್ಷ್ಮೀ ಹಬ್ಬದ ದಿನ ಲಕ್ಷ್ಮೀ ದೇವಿಯನ್ನು ಮನೆಗೆ ಬರ ಮಾಡಿಕೊಳ್ಳಲು, ಮನೆಯ ಮುಂದೆಯ ಆಕರ್ಷಕವಾದ ರಂಗೋಲಿಯನ್ನು ಬಿಡಿಸಿ. ಮನೆಯ ಅಂದವನ್ನು ಹೆಚ್ಚಿಸುವುದರೊಂದಿಗೆ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ದೇವರ ಕೋಣೆಯ ಅಲಂಕಾರದ ಗಮನ ಕೊಡುವುದು ಮುಖ್ಯ. ದೇವರ ಕೋಣೆಯ ಪ್ರವೇಶದ್ವಾರಕ್ಕೆ ತಳಿರುತೋರಣ ಹಾಗೂ ಹೂಮಾಲೆಯನ್ನು ಕಟ್ಟಿ ಅಂದವನ್ನು ಹೆಚ್ಚಿಸಬಹುದು.