ನೆಲಮಂಗಲ:- ʼಚನ್ನಪಟ್ಟಣ ಉಪ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು DCM ಡಿಕೆಶಿ ಹೇಳಿದ್ದಾರೆ.
ನೆಲಮಂಗಲದ ವೀರಭದ್ರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ತಿಳಿಸಿ ಅಚ್ಚರಿಯಲ್ಲಿ ಕೆಡವಿದರು.
ಚನ್ನಪಟ್ಟಣ ಉಪ ಚುನಾವಣೆಗೆ ನಾನೇ ಅಭ್ಯರ್ಥಿʼ ಎಂದು ಡಿಕೆಶಿ ಹೇಳಿದ್ದಾರೆ. ಸಿಪಿ ಯೋಗೇಶ್ವರ ಅವರು ಕ್ಷೇತ್ರದಲ್ಲಿ ದೋಸ್ತಿ ಪಕ್ಷಗಳ ಅಭ್ಯರ್ಥಿಯಾಗಿ ನಿಲ್ಲುವ ಆಸಕ್ತಿ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ಹಾಗೂ ಜೆಡಿಎಸ್ನಿಂದ ಸೂಕ್ತ ಪ್ರತಿಕ್ರಿಯೆ ಬಾರದ ಕಾರಣ, ಅವರು ಕಾಂಗ್ರೆಸ್ನಿಂದ ನಿಲ್ಲಲಿದ್ದಾರೆ ಎಂದು ಸುದ್ದಿಯಾಗಿತ್ತು. ಇನ್ನೊಂದೆಡೆ, ಕಾಂಗ್ರೆಸ್ನಿಂದ ಡಿಕೆ ಸುರೇಶ್ ಅವರು ಕಣಕ್ಕಿಳಿಯಲಿದ್ದಾರೆ ಎಂದು ಸುದ್ದಿಗಳು ಹಬ್ಬಿದ್ದವು. ಆದರೆ ಇದೀಗ ಚನ್ನಪಟ್ಟಣದ ಅಭ್ಯರ್ಥಿ ನಾನೇ ಎನ್ನುವ ಮೂಲಕ ಡಿಕೆಶಿ ಅಚ್ಚರಿ ಮೂಡಿಸಿದ್ದಾರೆ.
ʼಪ್ರಯತ್ನಕ್ಕಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನನಗೆ ನಂಬಿಕೆ ಇದೆ. ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯ ಮಳೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಇತಿಹಾಸವಿರುವ ವೀರಭದ್ರ ಹಾಗೂ ರುದ್ರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದೇನೆ. ಈ ದೇವಸ್ಥಾನಕ್ಕೆ ಬರಬೇಕೆಂದು ಬಹಳಷ್ಟು ದಿನದಿಂದ ಅಂದುಕೊಂಡಿದ್ದೆ. ಇತಿಹಾಸ ಇರುವ ಜಾಗ, ಹಾಗಾಗಿ ಬಂದು ಪೂಜೆ ಸಲ್ಲಿಸಿದ್ದೇನೆ ಸೌಭಾಗ್ಯ ಸಿಕ್ಕಿದೆʼ ಎಂದು ಡಿಕೆಶಿ ನುಡಿದರು.
ಗ್ಯಾರೆಂಟಿ ಯೋಜನೆಗಳ ಪರಿಷ್ಕರಣೆ ವಿಚಾರದ ಚರ್ಚೆ ಹಿನ್ನೆಲೆಯಲ್ಲಿ, ʼಯಾವ ಸಚಿವರೂ ಏನೂ ಮಾತನಾಡಲ್ಲ, ಏನೂ ಇಲ್ಲ. ಅನುಕೂಲ ಇರುವರಿಗೂ ಕೊಡ್ತಾ ಇದಾರೆ, ಅವರು ಬೇಡ ಎಂದು ಹೇಳ್ತಿದ್ದಾರೆ. ಅದರ ಬಗ್ಗೆ ಮುಂದೆ ಯೋಚನೆ ಮಾಡ್ತೇವೆ, ಈಗ ಯಾವುದೇ ಬದಲಾವಣೆ ಇಲ್ಲʼ ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚನ್ನಪಟ್ಟಣದಲ್ಲಿ ಗುರುವಾರ ನಡೆದ ಧ್ವಜಾರೋಹಣ ವಿಚಾರವಾಗಿ ಮಾತನಾಡಿದ ಡಿ. ಕೆ. ಶಿವಕುಮಾರ್, “ನಾನು ರಾಮನಗರದಲ್ಲೂ 5 ವರ್ಷ ಧ್ವಜಾರೋಹಣ ಮಾಡಿದ್ದೇನೆ. ಅಧಿಕಾರಿಗಳನ್ನು ಕೇಳಿದ್ದೆ, ಅವರು ಬಂದಿಲ್ಲ ಅಂದರು. ನಮ್ಮ ಡ್ಯೂಟಿ ನಾವು ಮಾಡಿದ್ದೇವೆ” ಎಂದರು.