ಖ್ಯಾತ ನಟ ರಾಜ್ ಬಿ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಾಜ್ ಬಿ ಶೆಟ್ಟಿಯವರ ಹೊಸ ಸಿನಿಮಾ ಸೆಟ್ಟೇರಿದ್ದು ಚಿತ್ರಕ್ಕೆ ‘ರಕ್ಕಸಪುರದೋಳ್’ ಎಂದು ಶೀರ್ಷಿಕೆ ಇಡಲಾಗಿದೆ. ಸಾಹಸ ನಿರ್ದೇಶಕರಾಗಿ ದೇಶಾದ್ಯಂತ ಜನಪ್ರಿಯತೆ ಪಡೆದಿರುವ ಕೆ. ರವಿವರ್ಮ ಅವರ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಇದುವರೆಗೂ ಸಾಹಸ ನಿರ್ದೇಶಕರಾಗಿದ್ದ ರವಿವರ್ಮ ಈ ಸಿನಿಮಾದ ಮೂಲಕ ನಿರ್ಮಾಪಕರಾಗಿ ಭಡ್ತಿ ಪಡೆದುಕೊಂಡಿದ್ದಾರೆ. ಇದು ಅವರ ಪ್ರಥಮ ನಿರ್ಮಾಣದ ಸಿನಿಮಾ ಎಂಬುದು ವಿಶೇಷ. ಈ ಚಿತ್ರಕ್ಕೆ ರವಿ ಸಾರಂಗ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರಾಗಿ ಅವರಿಗೂ ಇದು ಮೊದಲ ಸಿನಿಮಾ. ಬೆಂಗಳೂರಿನ ನೆಟಕಲ್ಲಪ್ಪ ಸರ್ಕಲ್ನಲ್ಲಿರುವ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮುಹೂರ್ತ ನಡೆಸಲಾಗಿದೆ.
‘ರಕ್ಕಸಪುರದೋಳ್’ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರು ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದ್ದೂ ಅಲ್ಲದೇ, ಶೀರ್ಷಿಕೆ ಅನಾವರಣ ಮಾಡಿ ಶುಭ ಹಾರೈಸಿದರು. ‘ಕೆ.ವಿ.ಎನ್. ಪ್ರೊಡಕ್ಷನ್ಸ್’ ಸಂಸ್ಥೆಯ ಸುಪ್ರೀತ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಿನಿಮಾದಲ್ಲಿ ನಾಯಕಿಯಾಗಿ ಸ್ವಾತಿಷ್ಟ ಕೃಷ್ಣ ನಟಿಸಲಿದ್ದಾರೆ. ಬಿ. ಸುರೇಶ, ಅರ್ಚನಾ ಕೊಟ್ಟಿಗೆ, ಗೌರವ್ ಶೆಟ್ಟಿ, ಸಿದ್ದಣ್ಣ, ಅನಿರುದ್ದ್ ಭಟ್, ಸುಮಾ ಕೂಡ ಪಾತ್ರವರ್ಗದಲ್ಲಿದ್ದಾರೆ.
ಪ್ರೇಮ್ ನಿರ್ದೇಶನದ ‘ದಿ ವಿಲನ್’, ‘ಏಕ್ ಲವ್ ಯಾ’ , ‘ಕೆಡಿ’ ಮುಂತಾದ ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ರವಿ ಸಾರಂಗ ಅವರಿಗೆ ಇದೆ. ‘ರಕ್ಕಸಪುರದೋಳ್’ ಬಗ್ಗೆ ಮಾತನಾಡಿದ ರಾಜ್ ಬಿ. ಶೆಟ್ಟಿ ಅವರು, ‘ಕಥೆ ಬಹಳ ಚೆನ್ನಾಗಿದೆ. ಜನರನ್ನು ಥಿಯೇಟರ್ಗೆ ಕರೆತರಲು ಬೇಕಾಗುವಂತಹ ಕಥೆಯನ್ನು ನಿರ್ದೇಶಕ ರವಿ ಸಿದ್ಧ ಮಾಡಿಕೊಂಡಿದ್ದಾರೆ. ನಾನು ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದೇನೆ. ಹಿಂದಿನ ಸಿನಿಮಾಗಳಿಗಿಂತ ಭಿನ್ನ ಪಾತ್ರವಿದು’ ಎಂದರು.
‘ನಾನು ಕಳೆದ 10 ವರ್ಷಗಳಿಂದ ಪ್ರೇಮ್ ಅವರ ಬಳಿ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ತಮ್ಮ ಪರಿಚಯ ಮಾಡಿಕೊಂಡರು ರವಿ ಸಾರಂಗ. ಸದ್ಯದಲ್ಲೇ ಶೂಟಿಂಗ್ ಆರಂಭಿಸುವುದಾಗಿ ಅವರು ಹೇಳಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.