ಆಗಸ್ಟ್ 15 ರಂದು ಹಲವು ಸಿನಿಮಾಗಳು ತೆರೆಕಂಡಿವೆ. ಕನ್ನಡದಲ್ಲಿ ಕೃಷ್ಣಂ ಪ್ರಣಯ ಸಖಿ, ಗೌರಿ, ತಮಿಳಿನಲ್ಲಿ ತಂಗಲಾನ್, ತೆಲುಗಿನಲ್ಲಿ ‘ಡಬಲ್ ಇಸ್ಮಾರ್ಟ್’ ಮತ್ತು ‘ಮಿಸ್ಟರ್ ಬಚ್ಚನ್’ ಸಿನಿಮಾಗಳು ಬಿಡುಗಡೆ ಆಗಿವೆ. ಬಹುತೇಕ ಎಲ್ಲ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಆದರೆ ರವಿತೇಜ ನಟಿಸಿರುವ ತೆಲುಗಿನ ‘ಮಿಸ್ಟರ್ ಬಚ್ಚನ್’ ಸಿನಿಮಾದ ಡ್ಯಾನ್ಸ್ ಸ್ಟೆಪ್ ವಿವಾದ ಸೃಷ್ಟಿಸಿದೆ.
ರವಿತೇಜ ನಟಿಸಿರುವ ‘ಮಿಸ್ಟರ್ ಬಚ್ಚನ್’ ಸಿನಿಮಾದ ‘ಸಿತಾರ’ ರೊಮ್ಯಾಂಟಿಕ್ ಹಾಡೊಂದರಲ್ಲಿ ಸ್ಟೆಪ್ ಒಂದಿದೆ. ಆ ಸ್ಟೆಪ್ನಲ್ಲಿ ರವಿತೇಜ, ನಟಿ ಭಾಗ್ಯಶ್ರೀ ಬೋರ್ಸೆ ಅವರ ನಡುವಿನ ಬಳಿ ಕೈ ಹಾಕಿ ಪಾಕೆಟ್ ರೀತಿ ಸೀರೆಯನ್ನು ಹಿಡಿದುಕೊಳ್ಳುತ್ತಾರೆ. ಹೀಗೆ ಹಿಡಿದುಕೊಂಡೇ ಒಂದು ಡ್ಯಾನ್ಸ್ ಸ್ಟೆಪ್ ಸಹ ಮಾಡುತ್ತಾರೆ. ಈ ದೃಶ್ಯಕ್ಕೆ ಕೆಲ ಮಾಸ್ ಆಡಿಯೆನ್ಸ್ ಶಿಳ್ಳೆ ಹೊಡೆದು ಎಂಜಾಯ್ ಮಾಡಿದ್ದಾರಾದರೂ ಹಲವರಿಗೆ ಈ ಸ್ಟೆಪ್ ಸರಿ ಎನಿಸಿಲ್ಲ. ಹಾಗಾಗಿ ಟ್ವಿಟ್ಟರ್ನಲ್ಲಿ ಈ ಬಗ್ಗೆ ಪ್ರಶ್ನೆ ಎದ್ದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ‘ಮಿಸ್ಟರ್ ಬಚ್ಚನ್’ ಸಿನಿಮಾದ ನಿರ್ದೇಶಕ ಹರೀಶ್ ಶಂಕರ್, ‘ಶೇಖರ್ ಮಾಸ್ಟರ್ ಆ ಹಾಡಿಗೆ ಡ್ಯಾನ್ಸ್ ಕಂಪೋಸ್ ಮಾಡಿಸಿದ್ದು, ಅದು ಸಿನಿಮಾದ ಚಿತ್ರೀಕರಣದ ಮೊದಲ ದಿನ. ನಾನು ಚಿತ್ರೀಕರಣ ಸೆಟಪ್ ಮಾಡುವ ಬ್ಯುಸಿಯಲ್ಲಿದ್ದೆ. ಆ ಸ್ಟೆಪ್ ನೋಡಿದಾಗ ನನಗೂ ಅನ್ನಿಸಿತು ಬೇಡವಾಗಿತ್ತೇನೋ ಎಂದು. ಆದರೆ ಇದನ್ನು ತೆಗೆಯಲೇ ಬೇಕು ಎಂದೇನು ನನಗೆ ಅನ್ನಿಸಲಿಲ್ಲ. ಅಲ್ಲದೆ, ಶೇಖರ್ ಮಾಸ್ಟರ್ ಆ ದಿನವಷ್ಟೆ ಬಂದು ಕೆಲಸ ಆರಂಭಿಸಿದ್ದರು. ನಾನು ಹೋಗಿ ಇದು ಬೇಡ, ಅದು ಇರಲಿ ಎಂದೆಲ್ಲ ಹೇಳುವುದು ಅವರ ಎನರ್ಜಿಗೆ ಅಡ್ಡಿ ಪಡಿಸಿದಂತಾಗುತ್ತದೆ ಎಂದುಕೊಂಡು ಹೇಳಲಿಲ್ಲ’ ಎಂದಿದ್ದಾರೆ.