ಹುಬ್ಬಳ್ಳಿ:- ಜನರಿಗೆ ತಪ್ಪು ಗ್ರಹಿಕೆ ಆಗಬಾರದು ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ಬಿಜೆಪಿಗಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ಮತದಾರರು ಕಾಂಗ್ರೆಸ್ ಪಕ್ಷಕ್ಕೆ 5 ವರ್ಷ ಜನಾದೇಶ ಕೊಟ್ಟಿದ್ದಾರೆ. ಹಾಗಾಗಿ ನಾವು ಬೀಳಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಪ್ರತಿಕ್ರಿಯಿಸಿದರು.
ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ನಾವು ಅಧಿಕಾರಕ್ಕೆ ಬರುವ ಆಲೋಚನೆ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಸರ್ಕಾರ 5 ವರ್ಷ ಸಂಪೂರ್ಣ ಆಡಳಿತ ನಡೆಸಲಿ ಎಂಬುದೇ ಬಿಜೆಪಿಯ ನಿಲುವು ಮತ್ತು ಆಶಯವಾಗಿದೆ. ಕಳೆದ ಬಾರಿ ಬಿಜೆಪಿ 104 ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ 68ಕ್ಕೆ ಇಳಿದಿತ್ತು. ಜನ ಅವರನ್ನು ತಿರಸ್ಕಾರ ಮಾಡಿದ್ದರು. ಆದಾಗ್ಯೂ ಕಾಂಗ್ರೆಸ್ – ಜೆಡಿಎಸ್ ಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯತ್ನಿಸಿದ್ದರು.
ಬಳಿಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಯತ್ನಿಸಿದರು. ಹಾಗಾಗಿ ಆಗಿನ ಸಂದರ್ಭದಲ್ಲಿ ಬಿಜೆಪಿ ಸಹ ಸರ್ಕಾರ ರಚಿಸಲು ಪ್ರಯತ್ನಿಸಿತ್ತು. ಆದರೆ, ಈ ಬಾರಿ ಬಿಜೆಪಿ ಅಂಥ ಯಾವುದೇ ಪ್ರಯತ್ನ ನಡೆಸುವುದಿಲ್ಲ ಎಂದರು