ಬೆಂಗಳೂರು:– ಚಂದ್ರಲೇಔಟ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ತಾಯಿ-ಮಗನನ್ನು ಕಿಡ್ನ್ಯಾಪ್ ಮಾಡಿ ಕಿರುಕುಳ ನೀಡಿದ ಆರೋಪದಲ್ಲಿ 9 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಹಣ ವಸೂಲಿ ಮಾಡಲು ಯುವಕ ಹಾಗೂ ಆತನ ತಾಯಿಯನ್ನು ಆರೋಪಿಗಳು ಅಪಹರಿಸಿ, ಕಿರುಕುಳ ನೀಡಿದ್ದರು ಎನ್ನಲಾಗಿದೆ.
ವರುಣ್ ಮತ್ತು ಆತನ ತಾಯಿಯನ್ನು ಅಪಹರಣ ಮಾಡಲಾಗಿತ್ತು. ರೌಡಿ ಶೀಟರ್ಗಳಾದ ಜೋಸೆಫ್, ಶ್ರೀನಿವಾಸ್ @ ಪಾಗಲ್ ಸೀನಾ, ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಬಂಧಿತ ಆರೋಪಿಗಳು ಎನ್ನಲಾಗಿದೆ.
ವರುಣ್ ಹಾಗೂ ತಾಯಿ ಇಬ್ಬರು ಸೇರಿ ಕಳ್ಳತನ ಮಾಡಿರುವ ವಿಚಾರ ಆರೋಪಿಗಳಿಗೆ ತಿಳಿದಿತ್ತು. ಹಾಗಾಗಿ ಕಳ್ಳತನ ಮಾಡಿರುವ ಹಣ ನೀಡುವಂತೆ ತಾಯಿ-ಮಗನನ್ನು ಆರೋಪಿಗಳು ಬೆದರಿಸಿದ್ದರು. ಆದರೆ, ಅವರು ಹಣ ನೀಡದ ಹಿನ್ನೆಲೆ ತಾಯಿ- ಮಗನನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು.
ಆ. 13ರಂದು ತಾಯಿ-ಮಗನನ್ನು ಆರೋಪಿಗಳಾದ ಜೋಸೇಫ್ ಮತ್ತು ಶ್ರೀನಿವಾಸ್@ಪಾಗಲ್ ಸೀನಾ ಕಿಡ್ನ್ಯಾಪ್ ಮಾಡಿದ್ದರು. ನಂತರ ಪರಿಚಯಸ್ಥ ಪ್ರತಾಪ್ ಮನೆಯಲ್ಲಿ ಅಕ್ರಮವಾಗಿ ಇರಿಸಿ ಟಾರ್ಚರ್ ನೀಡಲಾಗಿದೆ. ಈ ವೇಳೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು.
2 ಲಕ್ಷ ರೂ. ಕೊಡುವಂತೆ ಆರೋಪಿಗಳಿಂದ ಕಿರುಕುಳ ನೀಡಲಾಗಿದೆ. ಇಬ್ಬರ ಬಳಿಯೂ ಹಣ ಇಲ್ಲ ಎಂದು ಗೊತ್ತಾದಾಗ ಬಿಟ್ಟು ಕಳಿಸಿದ್ದಾರೆ. ನಂತರ ಮಹಿಳೆ ಚಂದ್ರಲೇಔಟ್ ಠಾಣೆಗೆ ದೂರು ನೀಡಿದ್ದರಿಂದ ಪ್ರಕರಣ ಸಂಬಂದ 9 ಆರೋಪಿಗಳ ಬಂಧನವಾಗಿದೆ.