ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಾರ್ವಜನಿಕರು ಸಾರಿಗೆಗೆ ಆದ್ಯತೆ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ. ನವ ಕರ್ನಾಟಕ ಶೃಂಗದಲ್ಲಿ ‘ಬೆಂಗಳೂರು-ಬೆಳವಣಿಗೆ ಜೋರು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹಲವು ಸ್ತರಗಳಲ್ಲಿ ರಸ್ತೆಗಳನ್ನು ನಿರ್ಮಿಸಿ, ನಿರ್ವಹಣೆ ಮಾಡುತ್ತಿದ್ದೇವೆ. ಕಳದ ಕೆಲವು ತಿಂಗಳಿಂದ ಸಂಚಾರದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಅತಿ ದಟ್ಟಣೆಯ ಕಾರಿಡಾರ್ಗಳನ್ನು ಗುರುತಿಸಿ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ.
ಪೆರಿಫೆರಲ್ ವರ್ತುಲ ರಸ್ತೆ ಮತ್ತು ಉಪ ನಗರ ವರ್ತುಲ ರಸ್ತೆಗಳ ನಿರ್ಮಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಧೈರ್ಯವನ್ನು ಈ ಸರ್ಕಾರ ತೋರಿದೆ. ಉಪ ನಗರ ರೈಲು ಸೇವೆ ಆರಂಭಿಸುವ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಮುಂದಾಗಿದೆ. ಮೆಟ್ರೊ ರೈಲು ಸೇವೆಯನ್ನು ವಿಸ್ತರಿಸಿದ್ದು, ಬಿಎಂಟಿಸಿಯನ್ನೂ ಬಲಪಡಿಸಲಾಗುತ್ತಿದೆ ಎಂದು ವಿವರ ನೀಡಿದರು. ಎಂಜಿನಿಯರಿಂಗ್, ಉದ್ಯೋಗ, ನವೋದ್ಯಮ, ಆವಿಷ್ಕಾರ, ತಂತ್ರಜ್ಞಾನ, ಬಯೋ ಟೆಕ್ನಾಲಜಿ ಸೇರಿದಂತೆ ಯಾವುದೇ ಹೊಸತನದಲ್ಲಿ ಬೆಂಗಳೂರು ಮುಂದಿದೆ. ಎಲ್ಲರಲ್ಲೂ ಸುಸ್ಥಿರ ಅಭಿವೃದ್ಧಿ ಕಂಡು ದೇಶಕ್ಕೆ ಮಾದರಿಯಾಗಿದೆ ಎಂದರು. ಬೆಂಗಳೂರು ಎಲ್ಲ ರೀತಿಯಲ್ಲೂ ಉತ್ತಮ ನಗರವಾಗಿ ಬೆಳೆದಿದೆ. ರಾಜ್ಯದ ಇತರೆ ನಗರಗಳೂ ಬೆಂಗಳೂರಿನಂತೆ ಭರವಸೆಯ ನಗರಗಳಾಗಿ ಹೊರಹೊಮ್ಮಬೇಕು. ಅದಕ್ಕೆ ಪೂರಕವಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದರು.