ಹುಬ್ಬಳ್ಳಿ : ಸರಣಿ ರಜೆ ಮುಗಿಸಿ ಕಾರ್ಯಕ್ಷೇತ್ರಗಳಿಗೆ ಹಿಂದಿರುಗುವವರು ಮತ್ತು ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಯಿತು ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಆಗಸ್ಟ 15ರಂದು ಗುರುವಾರ ಸ್ವಾತಂತ್ರ್ಯ ದಿನಾಚರಣೆ, 16ರಂದು ವರಮಹಾಲಕ್ಷ್ಮೀ ಹಬ್ಬ,17ರಂದು ವಾರಾಂತ್ಯ ಶನಿವಾರ ಹಾಗೂ 18ರಂದು ರವಿವಾರದ ಹಿನ್ನೆಲೆಯಲ್ಲಿ ನೌಕರರು ಸೇರಿದಂತೆ ದೂರದ ಊರುಗಳಲ್ಲಿ ನೆಲೆಸಿರುವ ಹಲವರು ಸ್ವಂತ ಊರುಗಳಿಗೆ ಆಗಮಿಸಿದ್ದರು. ಆದ್ದರಿಂದ ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಯಿತು.
ರಜೆ ಮುಗಿಸಿಕೊಂಡು ತಮ್ಮ ಕಾರ್ಯಕ್ಷೇತ್ರಗಳಿಗೆ ಹಿಂದಿರುಗುವವರು ಮತ್ತು ಇತರ ಪ್ರಯಾಣಿಕರಿಂದಾಗಿ ರವಿವಾರ ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣ ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣಗಳಿಂದ ಮಧ್ಯಾಹ್ನದಿಂದಲೇ ನೆರೆಯ ಜಿಲ್ಲೆಗಳು ಹಾಗೂ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಜಿಲ್ಲೆಯೊಳಗೆ ವಿವಿಧ ಸ್ಥಳಗಳು ಸೇರಿದಂತೆ ಬೆಂಗಳೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಗದಗ,ಬೆಳಗಾವಿ ಕಡೆಗೆ ಹೆಚ್ಚಿನ ಜನರು ಪ್ರಯಾಣ ಮಾಡಿರುವುದು ಕಂಡುಬಂತು.
ಮುಂಗಡ ಬುಕ್ಕಿಂಗ್ ಸಾರಿಗೆಗಳು ಸಾರಿಗೆಗಳು ರಿದಂತೆ ನಿತ್ಯದ ಎಲ್ಲಾ ಬಸ್ಸುಗಳು ಭರ್ತಿಯಾಗಿದ್ದವು. ಹೆಚ್ಚಿನ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಮಲ್ಟಿ ಆಯಕ್ಸಲ್ ವೋಲ್ವೋ, ರಾಜಹಂಸ ಹಾಗೂ ವೇಗದೂತ ಸಾರಿಗೆಗಳು ಸೇರಿದಂತೆ ಒಟ್ಟು 21 ಹೆಚ್ಚುವರಿ ವಿಶೇಷ ಬಸ್ಸುಗಳನ್ನು ಓಡಿಸಲಾಯಿತು.
ಅಧಿಕಾರಿಗಳಾದ ಪಿ.ವೈ.ಗಡಾದ, ಸದಾನಂದ ಒಡೆಯರ, ಐ.ಐ.ಕಡ್ಲಿಮಟ್ಟಿ, ಐ.ಜಿ. ಮಾಗಾಮಿ,, ಡಿಪೊ ಮ್ಯಾನೇಜರ ಗಳಾದ ರೋಹಿಣಿ, ಮುನ್ನಾಸಾಬ್, ನಾಗರಾಜ ಮತ್ತು ಸಿಬ್ಬಂದಿಗಳು ಪ್ರಮುಖ ಬಸ್ ನಿಲ್ದಾಣಗಲ್ಲಿ ಹಾಜರಿದ್ದು ತಡರಾತ್ರಿಯ ವರೆಗೆ ವಿಶೇಷ ಬಸ್ಸುಗಳ ಮೇಲ್ವಿಚಾರಣೆ ಮಾಡಿದರು ಎಂದು ಅವರು ಮಾಹಿತಿ ನೀಡಿದ್ದಾರೆ.