ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಒಂದಷ್ಟು ಕಡೆ ಬೀದಿನಾಯಿಗಳ ದಾಳಿಯಿಂದ ಗಾಯಗೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಬೀದಿನಾಯಿಗಳ ಕಡಿತದಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳುಗಳಲ್ಲಿ 600 ರಿಂದ 700 ರಷ್ಟು ಮಂದಿ ನಾಯಿ ಕಡಿತಕ್ಕೊಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇತ್ತ ಬೀದಿನಾಯಿಗಳ ಜೊತೆಗೆ ಸಾಕು ನಾಯಿಗಳು, ಬೆಕ್ಕುಗಳ ಕಡಿತ ಕೂಡ ಕೊಂಚ ಏರಿಕೆಯಾಗುತ್ತಿದೆ. ಬೀದಿ ನಾಯಿಗಳ ಕಾಟಕ್ಕೆ ಬ್ರೇಕ್ ಹಾಕಬೇಕಿದ್ದ ಪಾಲಿಕೆ ನಿದ್ದೆಗೆ ಜಾರಿದೆಯಾ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ನಾಯಿ ಕಚ್ಚಿ ಆಸ್ಪತ್ರೆ ಸೇರಿದವರ ಸಂಖ್ಯೆ
ಮೇ ತಿಂಗಳಿನಲ್ಲಿ ಒಟ್ಟು 933 ಜನರಿಗೆ ಚಿಕಿತ್ಸೆ
ಜೂನ್ ತಿಂಗಳಲ್ಲಿ ಒಟ್ಟು 642 ಜನರಿಗೆ ಚಿಕಿತ್ಸೆ
ಜುಲೈ ತಿಂಗಳಲ್ಲಿ 781 ಜನರಿಗೆ ಚಿಕಿತ್ಸೆ ಕೊಡಲಾಗಿದೆ
ಇತ್ತ ಬೀದಿನಾಯಿಗಳ ಕಾಟ ಹೆಚ್ಚಾಗಿರುವ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ, ಈಗಾಗಲೇ ಹಲವೆಡೆ ಬೀದಿನಾಯಿಗಳನ್ನ ಹಿಡಿದು ಹೊರಬಿಡುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
ಬೀದಿನಾಯಿಗಳ ಜೊತೆ ಸಾಕುನಾಯಿಗಳು ಕಚ್ಚುವ ಪ್ರಕರಣ ಕೂಡ ಹೆಚ್ಚಿತ್ತು. ಈಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪಾಲಿಕೆಯ ಪಶುಪಾಲನ ಅಧಿಕಾರಿ ಚಂದ್ರಯ್ಯ ತಿಳಿಸಿದ್ದಾರೆ.