ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ ಗತಿ ಬಗ್ಗೆ ಅಧ್ಯಯನ ನಡೆಸಿರುವ ಹೇಮಾ ವರದಿಯನ್ನು ಇತ್ತೀಚೆಗಷ್ಟೆ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಲಾಗಿದೆ. 2017ರಲ್ಲಿ ಮಲಯಾಳಂ ನಟಿಯೊಬ್ಬರ ಮೇಲೆ ಸ್ಟಾರ್ ನಟನೊಬ್ಬನ ಚೇಲಾಗಳಿಂದ ಅತ್ಯಾಚಾರ ಯತ್ನ ನಡೆದ ಬಳಿಕ ಹೇಮಾ ನಿಗಮವನ್ನು ರಚಿಸಲಾಗಿತ್ತು. ಮಾಜಿ ಹೈಕೋರ್ಟ್ ಜಡ್ಜ್ ಹೇಮಾ, ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟಿ ಶಾರದಾ ಇನ್ನಿತರರನ್ನು ಈ ಸಮಿತಿ ಒಳಗೊಂಡಿತ್ತು. 2019ರಲ್ಲಿಯೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತಾದರೂ ಸೂಕ್ಷ್ಮ ಅಂಶಗಳನ್ನು ವರದಿ ಒಳಗೊಂಡಿದ್ದರಿಂದ ಸರ್ಕಾರ ಅದನ್ನು ಬಹಿರಂಗಪಡಿಸಿರಲಿಲ್ಲ. ಬಳಿಕ ಹಲವು ಆರ್ಟಿಐ ಅರ್ಜಿಗಳು ಹಾಗೂ ನ್ಯಾಯಾಲಯದ ಸೂಚನೆ ಮೇರೆಗೆ ಈಗ ಬಹಿರಂಗಪಡಿಸಲಾಗಿದೆ.
ಹೇಮಾ ವರದಿಯಲ್ಲಿ ಮಲಯಾಳಂ ಚಿತ್ರರಂಗದ ಕರಾಳ ಮುಖ ಬಯಲಾಗಿದೆ. ಹಲವು ಸಿನಿಮಾ ನಟಿಯರು ಅನುಭವಿಸಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಹಿಂದಿನ ರಾತ್ರಿ ಯಾವ ನಟನಿಂದ ಲೈಂಗಿಕ ದೌರ್ಜನ್ಯ ಎದುರಿಸಿದ್ದರೋ ಅದೇ ನಟನ ಜೊತೆಗೆ ಬೆಳೆಗೆದ್ದು ಪತಿ-ಪತ್ನಿಯಾಗಿ ನಟಿಸಬೇಕಿತ್ತು. ನನಗೆ ಪ್ರೀತಿಯಿಂದ ನಟಿಸಲು ಸಾಧ್ಯವಾಗದೆ 17 ಟೇಕ್ ತೆಗೆದುಕೊಂಡೆ ಕೊನೆಗೆ ಸಿನಿಮಾದ ನಿರ್ದೇಶಕ ಹಾಗೂ ನಟನಿಂದ ಬೈಸಿಕೊಂಡೆ’ ಎಂದು ನಟಿಯೊಬ್ಬರು ಹೇಮಾ ಸಮಿತಿಯ ಮುಂದೆ ಹೇಳಿಕೊಂಡಿದ್ದಾರೆ.
ಶೂಟಿಂಗ್ ಗೆ ಹೋದಾಗ ನಟಿಯರು ಇರುವ ಹೋಟೆಲ್ ಕೊಠಡಿಗಳ ಬಾಗಿಲುಗಳನ್ನು ಪುರುಷರು ಬಡಿಯುತ್ತಾರೆ. ಆ ವೇಳೆಗೆ ಅವರೆಲ್ಲ ಚೆನ್ನಾಗಿ ಕುಡಿದಿರುತ್ತಾರೆ. ಒಮ್ಮೊಮ್ಮೆಯಂತೂ ಬಾಗಿಲು ಕಿತ್ತು ಬರುತ್ತದೇನೋ ಎಂಬಂತೆ ಬಾಗಿಲು ಬಡಿಯುತ್ತಾರೆ. ಇದೇ ಕಾರಣಕ್ಕೆ ನಾವು ಹೊರಗಡೆ ಶೂಟಿಂಗ್ಗೆ ಹೋಗುವುದಿಲ್ಲ ಹೋದರೂ ನಮ್ಮ ಕುಟುಂಬದವರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಕೆಲ ನಟಿಯರು ಹೇಳಿದ್ದಾರೆ.
ವರದಿಯಲ್ಲಿ ಉಲ್ಲೇಖಿಸಿರುವಂತೆ ಇಡೀ ಮಲಯಾಳಂ ಚಿತ್ರರಂಗ ಕೆಲ ಪುರುಷರ ಕೈಯಲ್ಲಿದೆ. ಕೆಲ ಸ್ಟಾರ್ ನಟರು, ನಿರ್ಮಾಪಕರು, ವಿತರಕರು ಚಿತ್ರರಂಗವನ್ನು ನಡೆಸುತ್ತಿದ್ದಾರೆ. ಇದು ಒಂದು ರೀತಿ ಪವರ್ ಹೌಸ್ ಸಿಸ್ಟಂ. ಇವರು ಹೇಳಿದವರಿಗೆ ಅವಕಾಶ ಸಿಗುತ್ತದೆ, ಇವರೊಟ್ಟಿಗೆ ‘ಚೆನ್ನಾಗಿದ್ದರೆ’ ಹೊಸ ಸಿನಿಮಾಗಳು, ಒಳ್ಳೆಯ ಸಂಭಾವನೆ ಸಿಗುತ್ತದೆ ಎಂದು ನಟಿಯರು ಹೇಳಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ನಟಿಯರು ಸಾಕಷ್ಟು ಟೀಕೆ, ಮೂದಲಿಕೆಗಳನ್ನು ಚಿತ್ರರಂಗದಲ್ಲಿ ಎದುರಿಸುತ್ತಿದ್ದಾರಂತೆ. ಅನವಶ್ಯಕವಾಗಿ ಅಡ್ವಾನ್ಸ್ ಹಣ ನೀಡುವುದು, ಪರೋಕ್ಷವಾಗಿ ‘ಅಡ್ಜಸ್ಟ್ಮೆಂಟ್’ಗೆ ಕೇಳುವುದು. ಮಾತು ಕೇಳದಿದ್ದರೆ ಅವಕಾಶ ಸಿಗದಂತೆ ಮಾಡುವುದು ಇಂಥಹಾ ಹಲವು ಕೆಲಸಗಳು ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತವಂತೆ. ಇನ್ನೂ ಹಲವು ಅಂಶಗಳು ಈ ವರದಿಯಲ್ಲಿವೆ. ಹೇಮಾ ವರದಿ ಪ್ರಕಟವಾದ ಬಳಿಕ ಇದೀಗ ಭಾರತದ ಎಲ್ಲ ಚಿತ್ರರಂಗಗಳಲ್ಲಿಯೂ ಇಂಥಹಾ ಒಂದು ಸಮಿತಿ ರಚನೆಯಾಗಿ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನ ಆಗಬೇಕೆಂಬ ಕೂಗು ಕೇಳಿ ಬರುತ್ತಿದೆ.