ಮಂಡ್ಯ :- ಮದ್ದೂರು ಕ್ಷೇತ್ರದ ಜನರಿಗೆ ನಾನು ಕೇವಲ ಭರವಸೆಗಳನ್ನೆ ನೀಡದೇ ಯೋಜನೆಗಳನ್ನು ಅನುಷ್ಟಾನಕ್ಕೂ ತಂದಿದ್ದೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿಯ ಹೆಮ್ಮನಹಳ್ಳಿ, ಕದಲೂರು ಹಾಗೂ ಮಲ್ಲನಕುಪ್ಪೆ ಗ್ರಾಮಗಳಲ್ಲಿ ಅಂದಾಜು 1.50 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕಳೆದ 10 ವರ್ಷಗಳಿಂದ ಕ್ಷೇತ್ರದ ಪ್ರತಿಯೊಂದು ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದೇನೆ. ಜನರು ನನ್ನ ಬಳಿ ಬಂದು ಇಂತಹ ಕೆಲಸವಾಗಬೇಕು ಎಂದು ಅರ್ಜಿ ಸಲ್ಲಿಸುವ ಮೊದಲೇ ಆ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದೇನೆ ಎಂದರು.
ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜನರನ್ನು ಯಾಮಾರಿಸಲು ನನಗೆ ಬರುವುದಿಲ್ಲ. ಮದ್ದೂರು ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಆಯ್ಕೆಯಾಗಿದ್ದ ಯಾವ ಶಾಸಕರು ಮಾಡದ ಅಭಿವೃದ್ಧಿ ಕೆಲಸಗಳನ್ನು ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ತೃಪ್ತಿ ನನಗಾಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚರತ್ನ ಯೋಜನೆಗಳನ್ನು ನಾನು ಈಗಾಗಲೇ ಹೋಬಳಿಗಳ ಮಟ್ಟದಲ್ಲಿ ಅನುಷ್ಟಾನಕ್ಕೆ ತಂದಿದ್ದೇನೆ. ರೈತರಿಗೆ ಅನುಕೂಲವಾಗುವಂತಹ ಬೃಹತ್ ನೀರಾವರಿ ಯೋಜನೆ, ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆ, ಕುಡಿಯುವ ನೀರು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಘೋಷವಾಕ್ಯದೊಂದಿಗೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದೇನೆ ಎಂದರು.