ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಘಟನೆಯ ಬಗ್ಗೆ ಅನೇಕರು ಪ್ರತಿಕ್ರಯಿಸಿದ್ದು ಹಲವರು ತಮಗಾದ ಲೈಂಗಿಕ ಕಿರುಕುಳ, ಯಾತನೆ, ನೋವುಗಳ ಬಗ್ಗೆ ಮಾತನಾಡಿದ್ದಾರೆ. ಇದೀಗ ನಟಿ ಸೆಲಿನಾ ಜೇಟ್ಲಿ ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.
ತಮ್ಮ ಆರನೇ ತರಗತಿ ಫೋಟೋ ಒಂದನ್ನು ಪೋಸ್ಟ್ ಮಾಡಿದ ಸೆಲಿನಾ, ಇಂಥ ಪ್ರಕರಣಗಳಲ್ಲಿ ಯಾವಾಗಲೂ ಬಲಿಪಶುವನ್ನೇ ತಪ್ಪು ಮಾಡಿದವಳು ಎಂದು ಹೇಳಲಾಗುತ್ತದೆ. ಈ ಫೋಟೋ ನಾನು ಆರನೇ ತರಗತಿಯಲ್ಲಿದ್ದಾಗಿನದು. ಹತ್ತಿರದ ಕಾಲೇಜಿನ ಹುಡುಗನೊಬ್ಬ ನಾನು ಶಾಲೆಯಿಂದ ಹೊರಬರುವುದನ್ನು ಕಾಯುತ್ತಿದ್ದ. ಅವನು ಪ್ರತಿದಿನ ನನ್ನ ಶಾಲೆಯ ರಿಕ್ಷಾವನ್ನು ಹಿಂಬಾಲಿಸಿ ಮನೆಯವರೆಗೆ ಬರುತ್ತಿದ್ದ. ಕೆಲವು ದಿನಗಳ ನಂತರ, ನನ್ನ ಗಮನವನ್ನು ಸೆಳೆಯಲು, ಅವನು ರಸ್ತೆಯ ಮಧ್ಯದಲ್ಲಿ ನನ್ನ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ್ದ. ಅಲ್ಲಿದ್ದವರು ಯಾರೂ ಆತನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದಿದ್ದಾರೆ.
ಇದರ ಮಧ್ಯೆ ನನ್ನ ಟೀಚರ್ ನನ್ನ ಮೇಲೆಯೇ ಆರೋಪ ಮಾಡಿದ್ರು. ನಾನು ಬಿಗಿಯಾದ ಬಟ್ಟೆ ಧರಿಸುತ್ತೇನೆ, ಕೂದಲಿಗೆ ಎಣ್ಣೆ ಹಚ್ಚಿ, ಕೂದಲು ಕಟ್ಟೋದಿಲ್ಲ. ಹಾಗಾಗಿ ಹುಡುಗ ನನ್ನ ಹಿಂದೆ ಬಿದ್ದಿದ್ದಾನೆ ಎಂದು ಟೀಚರ್ಸ್ ನನಗೆ ಹೇಳುತ್ತಿದ್ದರು. ಶಿಕ್ಷಕರ ಈ ಮಾತಿನ ನಂತರ ನಾನು ತುಂಬಾ ದಿನ ನನ್ನನ್ನೇ ದೂಷಿಸಿಕೊಳ್ಳುತ್ತಿದ್ದೆ. ಒಂದು ದಿನ ಬೆಳಿಗ್ಗೆ ಶಾಲೆಗೆ ಹೋಗಲು ರಿಕ್ಷಾಕ್ಕೆ ಕಾಯುತ್ತಿದ್ದಾಗ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗ ತೋರಿಸಿದ. ತೀವ್ರ ಮುಜುಗರವಾಯಿತು. ಆದರೆ ಟೀಚರ್ ಮಾತನ್ನು ನೆನೆದುಕೊಂಡು ಆಗ್ಲೂ ನಾನು ನನ್ನನ್ನು ದೂಷಿಸಿಕೊಂಡಿದ್ದೆ ಎಂದು ಸೆಲಿನಾ ಹೇಳಿದ್ದಾರೆ.
ನಾನು 11ನೇ ತರಗತಿಯಲ್ಲಿದ್ದಾಗ, ಹುಡುಗರು ನನ್ನ ಸ್ಕೂಟಿ ಬ್ರೇಕ್ ಕಟ್ ಮಾಡಿದ್ದರು. ಅವರು ಅಶ್ಲೀಲವಾಗಿ ನಿಂದಿಸಿದ್ದರು. ನೀನು ಜೀನ್ಸ್ ಧರಿಸಿ, ಮಾಡರ್ನ್ ಆಗಿ ಕಾಣುವ ಕಾರಣ ಯುವಕರು ನಿನ್ನನ್ನು ತಪ್ಪು ತಿಳಿದಿದ್ದಾರೆಂದು ಶಿಕ್ಷಕಿ ಆಗ್ಲೂ ಹೇಳಿದ್ದರಂತೆ. ಇದ್ರಿಂದ ನಾನು ತುಂಬಾ ನೋವು ತಿಂದಿದ್ದೆ ಎಂದು ಸೆಲಿನಾ ಸುದೀರ್ಘ ಪೋಸ್ಟ್ ಬರೆದುಕೊಂಡಿದ್ದಾರೆ.