ಹಾಸನ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿರುವ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಶಿವಲಿಂಗೇಗೌಡರಿಗೆ ನಿರಂತರ ಆಡಿಯೋ ಲೀಕ್ ತಲೆನೋವಾಗಿ ಮಾರ್ಪಟ್ಟಿದೆ. ಶಾಸಕರು ತಮ್ಮ ಆಪ್ತರ ಜೊತೆಗೆ ಮಾತನಾಡುತ್ತಿರುವ ಆಡಿಯೋ ಒಂದರ ಬೆನ್ನಲ್ಲೇ ಒಂದರಂತೆ ವೈರಲ್ ಆಗುತ್ತಿದೆ. ಕೇವಲ ಫೋನ್ ಸಂಭಾಷಣೆ ಮಾತ್ರವಲ್ಲ, ಆಪ್ತರ ಜೊತೆಗೆ ಸಭೆಗಳಲ್ಲೂ ಮಾತನಾಡಿರುವ ಆಡಿಯೋ ಬಹಿರಂಗಗೊಳ್ಳುತ್ತಿದ್ದು, ದಳ ತೊರೆಯುವ
ಶಿವಲಿಂಗೇಗೌಡ ರೇವಣ್ಣ ಆಡಿಯೋ ವೈರಲ್
ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ ಎಂದು ಮಾಜಿ ಸಚಿವ ಎಚ್ಡಿ ರೇವಣ್ಣ ಜೊತೆಗೆ ಹೇಳಿಕೊಂಡಿದ್ದಾರೆ ಎನ್ನಲಾಗಿರುವ ಶಿವಲಿಂಗೇಗೌಡರ ಫೋನ್ ಸಂಭಾಷಣೆ ವೈರಲ್ ಆಗಿದೆ. ರೇವಣ್ಣ ಹಾಗೂ ಶಿವಲಿಂಗೇಗೌಡ ಅವರು ಮಾತನಾಡಿರುವ ಫೋನ್ ಸಂಭಾಷಣೆಯನ್ನು ಯಾರು ಲೀಕ್ ಮಾಡಿದ್ದಾರೆ ಎಂಬುವುದು ಸ್ಪಷ್ಟಗೊಂಡಿಲ್ಲ.
ಆದರೆ ಇದು ನಕಲಿ ಎಂದು ಶಿವಲಿಂಗೇಗೌಡರು ಹೇಳಿದರೂ, ರೇವಣ್ಣ ಅವರು ಈ ಸಂಭಾಷಣೆ ಸುಳ್ಳು ಎಂದಾದರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಹಾಗೂ ಸುಳ್ಳೆಂದು ಸಾಬೀತು ಮಾಡಲಿ ಎಂದು ರೇವಣ್ಣ ಸವಾಲು ಹಾಕಿದ್ದಾರೆ.
ಶಿವಲಿಂಗೇಗೌಡರ ಆಡಿಯೋ ಹೀಗೆ ಲೀಕ್ ಆಗಿರುವುದು ಇದೇ ಮೊದಲೇನಲ್ಲ. ಹಲವು ಬಾರಿ ಕಾರ್ಯಕರ್ತರ ಜೊತೆಗೆ ಮಾತನಾಡಿರುವ ಆಡಿಯೋ ವೈರಲ್ ಆಗುತ್ತಿದೆ. ಇದರ ಹಿಂದೆ ವ್ಯಕ್ತಿಯೊಬ್ಬರು ಇದ್ದಾರೆ ಎಂದು ಶಿವಲಿಂಗೇಗೌಡ ಆರೋಪ ಮಾಡಿಕೊಂಡು ಬಂದಿದ್ದಾರೆ. ನನ್ನದೇ ಧ್ವನಿಯನ್ನು ಅನುಕರಣೆ ಮಾಡಿ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ.
50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದಿದ್ದ ಆಡಿಯೋ ವೈರಲ್
ಈ ಹಿಂದೆ ಶಿವಲಿಂಗೇಗೌಡರ ಮತ್ತೊಂದು ಆಡಿಯೋ ವೈರಲ್ ಆಗಿತ್ತು. ಈ ಮೂಲಕ ಶಿವಲಿಂಗೇಗೌಡರು ಜೆಡಿಎಸ್ ತೊರೆಯುವ ವಿಚಾರ ಬಹಿರಂಗಗೊಂಡಿತ್ತು. ಕಾರ್ಯಕರ್ತರೊಬ್ಬರ ಜೊತೆ ಮಾತನಾಡಿದ್ದ ಶಾಸಕರು, ನಾನು ಕಾಂಗ್ರೆಸ್ ಸೇರಿದ್ರೆ ಐವತ್ತು ಸಾವಿರ ಲೀಡ್ ನಲ್ಲಿ ಗೆಲ್ಲುತ್ತೇನೆ. ಯಾರೇ ಬಂದರೂ ಗೆಲ್ಲೋದು ಮಾತ್ರ ನಾನೇ ಎಂದಿದ್ದರು. ಈ ಆಡಿಯೋಗೂ ಶಿವಲಿಂಗೇಗೌಡ ತಮ್ಮದೇ ಆದ ಸ್ಪಷ್ಟನೆಯನ್ನು ನೀಡಿದ್ದರು.
ಆಡಿಯೋ ಲೀಕ್ ಹಿಂದೆ ಯಾರ ಕೈವಾಡ?
ಶಿವಲಿಂಗೇಗೌಡ ಅವರು ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜೊತೆಗೆ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತಿರುವ ಹಿಂದೆ ಯಾರ ಕೈವಾಡ ಇದೆ ಎಂಬ ಚರ್ಚೆಯೂ ನಡೆಯುತ್ತಿದೆ. ಶಿವಲಿಂಗೇಗೌಡ ಪ್ರಕಾರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆವರ ಜೊತೆಗಿದ್ದ ವ್ಯಕ್ತಿಯೊಬ್ಬ ಕೈವಾಡ ಇದರ ಹಿಂದೆ ಇದೆ ಎಂದು. ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಲು ಇದೆಲ್ಲ ನಡೆಸುತ್ತಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ ಶಿವಲಿಂಗೇಗೌಡ.
ಒಟ್ಟಿನಲ್ಲಿ ಜೆಡಿಎಸ್ ತೊರೆಯಲು ಮುಂದಾಗಿರುವ ಶಿವಲಿಂಗೇಗೌಡ ಅವರಿಗೆ ಒಂದರ ಬೆನ್ನಲ್ಲೇ ಒಂದರಂತೆ ಬಿಡುಗಡೆಗೊಳ್ಳುತ್ತಿರುವ ಆಡಿಯೋ ಬಾಂಬ್ ತಲೆನೋವಿಗೆ ಕಾರಣವಾಗಿದೆ. ಈ ಆಡಿಯೋ ಕ್ಷೇತ್ರದಲ್ಲೂ ಚುನಾವಣಾಯ ಮೇಲೆ ಪರಿಣಾಮ ಬೀರುವ ಆತಂಕ ಇದೆ. ಆದರೆ ಇದನ್ನು ಶಿವಲಿಂಗೇಗೌಡ ಹೇಗೆ ನಿಭಾಯಿಸುತ್ತಾರೆ ಎಂಬುವುದನ್ನು ನೋಡಬೇಕಿದೆ.