ಹುಬ್ಬಳ್ಳಿ: ರಸ್ತೆ, ಒಳಚರಂಡಿ, ಗಟಾರು, ಕುಡಿಯುವ ನೀರು ಇವು ನಗರ ನಾಗರಿಕರ ಮೂಲಭೂತ ಅಗತ್ಯಗಳು. ಆದರೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಇವುಗಳನ್ನು ಪೂರೈಸುವುದಕ್ಕೆ ಆಗುತ್ತಿಲ್ಲ, ಮೂಲ ಸಮಸ್ಯೆಗಳೇ ಜನರನ್ನು ಹೈರಾಣಾಗಿಸುತ್ತಿವೆ. ಯಾವಾಗ ಇವುಗಳಿಗೆ ಶಾಶ್ವತ ಪರಿಹಾರ ಕೊಡುತ್ತೀರಿ?
ಇಲ್ಲಿಯ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮೇಯರ್ ರಾಮಪ್ಪ ಬಡಿಗೇರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿ ವಿಭಾಗದ ವಾರ್ಡ್ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಹಾಗೂ ಸದಸ್ಯರ ಸಮಸ್ಯೆ ಆಲಿಕೆಗೆ ಆಯೋಜಿಸಿದ್ದ ಸಭೆಯಲ್ಲಿ ಕೇಳಿ ಬಂದ ಪ್ರಶ್ನೆಗಳಿವು
ಮೊದಲ ಬಾರಿ ಪ್ರತಿ ವಾರ್ಡ್ ಸಮಸ್ಯೆ ಆಲಿಕೆಗೆ ಮೇಯರ್ ಅವರು ಸಭೆ ನಡೆಸುತ್ತಿರುವುದಕ್ಕೆ ಅನೇಕ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಪ್ರತಿಯೊಬ್ಬರು ತಮ್ಮ ವಾಡಿರ್ನಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು.
ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಉತ್ತರ ಕೊಡಿಸುವ ಪ್ರಯತ್ನ ಮಾಡಿದರು. ಕೆಲವು ತೊಂದರೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಕ್ಕರೆ ಇನ್ನೂ ಕೆಲವು ನಂತರದಲ್ಲಿ ಮಾಡಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ಇದು ಕಾಟಾಚಾರದ ಸಭೆಯಾಗಬಾರದು. ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸಭೆಯಲ್ಲಿ ಅನೇಕ ಸದಸ್ಯರು ಕಲುಷಿತ ನೀರು ಪೂರೈಕೆಯಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನೀರು ಸಂಸ್ಕರಣೆಗೆ ಬೇಕಾದ ರಾಸಾಯನಿಕಗಳು ಇವೆ. ಆದರೆ, ನೀರು ಸಂಸ್ಕರಿಸುವ ಬೆಡ್ ಹಾಳಾಗಿವೆ. ಹಾಗಾಗಿ ಸರಿಯಾಗಿ ಸಂಸ್ಕರಣೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಬೆಡ್ಗಳ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೇಲಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಮಾಹಿತಿಯೂ ಸಭೆಯಲ್ಲಿ ಬಹಿರಂಗವಾಯಿತು. ಇಂಜಿನಿಯರ್ಗಳ ತಂಡವನ್ನು ಕಳುಹಿಸಿ ವಾಸ್ತವ ಸ್ಥಿತಿ ಮಾಹಿತಿ ಪಡೆಯುವುದಾಗಿ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಭರವಸೆ ನೀಡಿದರು.
ಅನೇಕ ಸದಸ್ಯರು ವಾರ್ಡ್ ಫಂಡ್ ತಮಗೆ ಒಂದು ಪೈಸೆಯೂ ಸಿಗುತ್ತಿಲ್ಲ. ನಾವು ಜನರಿಂದ ಆಯ್ಕೆಯಾಗಿಲ್ಲವೇ? ಎಂದು ಪ್ರಶ್ನಿಸಿದರು. ಹಲವು ಕಡತಗಳು ಆಯುಕ್ತರ ಬಳಿ ಹಾಗೇ ಕುಳಿತಿವೆ. ಬೇಗ ಅವುಗಳಿಗೆ ಮುಕ್ತಿ ಕಾಣಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.