ಮೈಸೂರು: ಸಿಎಂ ಸಿದ್ದರಾಮಯ್ಯನವರು ಮುಡಾ ಹಗರಣಕ್ಕೆಸಂಬಂಧಿಸಿದಂತೆ ಸುಳ್ಳು ಹೇಳಿದ್ರಾ ಎಂಬ ಗಂಭೀರವಾದ ಪ್ರಶ್ನೆ ಎದ್ದಿದೆ. ಬುಧವಾರ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಮುಡಾಕ್ಕೆ ಬರೆದ ಪತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದವು. ಈ ಪತ್ರ ಬೆಳಕಿಗೆ ಬಂದ ಬೆನ್ನಲ್ಲೇ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಸಿದ್ದರಾಮಯ್ಯ, ನನ್ನ ಪತ್ನಿ ಯಾವುದೇ ಪತ್ರ ಬರೆದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಆದರೆ ಪಾರ್ವತಿ ಅವರು ಪತ್ರ ಬರೆದ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಉಲ್ಲೇಖ ಮಾಡಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್ ನೀಡಿದ್ದರು. ಈ ನೋಟಿಸ್ಗೆ ಸಿದ್ದರಾಮಯ್ಯನವರು ಉತ್ತರ ನೀಡಿದ್ದರು. ಈ ಉತ್ತರದಲ್ಲಿ ಪತ್ನಿ ಪಾರ್ವತಿ ಅವರು ಮುಡಾಗೆ ಬರೆದ ಪತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ. 30ನೇ ಖಂಡಿಕೆ 15ನೇ ಅನೆಕ್ಸರ್ ನಲ್ಲಿ ತಮ್ಮ ಪತ್ನಿ ಮುಡಾಗೆ ಪತ್ರ ಬರೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇನ್ನು ಸ್ನೇಹಮಯಿ ಕೃಷ್ಣ ಅವರು ರಿಟ್ ಅರ್ಜಿಯಲ್ಲಿ ಸಿಎಂ ನ್ಯಾಯಾಲಯದ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ ಎಂದೂ ಗಂಭೀರ ಆರೋಪ ಮಾಡಿದ್ದಾರೆ. ಮುಡಾ ಹಗರಣ ವಿಚಾರವಾಗಿ ಸಿಎಂ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದಿರುವುದು ಸಿದ್ದರಾಮಯ್ಯಗೆ ಮೊದಲೇ ಗೊತ್ತಿತ್ತು. ಸಿದ್ದರಾಮಯ್ಯ ಒಟ್ಟು 713 ಪುಟಗಳ ದಾಖಲೆ ಒಳಗೊಂಡ ರಿಟ್ ಅರ್ಜಿಯನ್ನು ಕೋರ್ಟ್ಗೆ ಹಾಕಿದ್ದಾರೆ. 531ನೇ ಪುಟವಾಗಿ ಪಾರ್ವತಿ ಬರೆದ ಅರ್ಜಿಯ ಮೊದಲ ಪುಟ ಇದೆ. ಆದರೆ 532ನೇ ಪುಟದಲ್ಲಿ ಪಾರ್ವತಿ ಅವರು ಬರೆದ ಎರಡನೇ ಪುಟ ಇಲ್ಲ.
ಅದರಲ್ಲೂ ಎರಡನೇ ಪುಟದಲ್ಲಿ ಸಾಕ್ಷ್ಯ ನಾಶ ಎನ್ನುವ ರೀತಿಯಲ್ಲಿ ವೈಟ್ನರ್ ಹಾಕಿ ಅಳಿಸುವ ಪ್ರಯತ್ನ ಮಾಡಲಾಗಿದೆ. 532ನೇ ಪುಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಡಾವಳಿ ಪತ್ರ ಇದೆ. ವೈಟ್ನರ್ ಹಾಕಿದ ಕಾರಣಕ್ಕಾಗಿ ಎರಡನೇ ಪುಟ ಬಿಟ್ಟು ಕೇವಲ ಒಂದು ಪುಟ ಮಾತ್ರ ಕೋರ್ಟ್ಗೆ ಕೊಟ್ಟಿದ್ದಾರೆ. ಆ ಮೂಲಕ ರಾಜ್ಯ ಜನರಿಗೆ ಹಾಗೂ ಕೋರ್ಟ್ಗೆ ಸತ್ಯ ಮುಚ್ಚಿಡುತ್ತಿದ್ದಾರೆ. ಇದೇ ವಿಚಾರದಲ್ಲಿ ರಾಜ್ಯಪಾಲರಿಗೆ ಬರೆದಿರುವ ಶೋಕಾಸ್ ನೋಟಿಸ್ನಲ್ಲೂ ಸಿಎಂ ಹೇಳಿದ್ದಾರೆ.