ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಪಡೆಯಲು ಮುಂದಾಗಿದ್ದಾರೆ. ಆದರೆ ಇದು ಗಂಭೀರ ಪ್ರಕರಣ ಆದ್ದರಿಂದ ಜಾಮೀನು ಸಿಗುವುದು ಅಷ್ಟು ಸುಲಭವಿಲ್ಲ. ಬೇಲ್ ಪಡೆಯಲು ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಎರಡನೇ ಬಾರಿಗೆ ಮುಂದೂಡಲಾಗಿದೆ.
ಆಗಸ್ಟ್ 27ಕ್ಕೆ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಪವಿತ್ರಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿ ನ್ಯಾಯಾಧೀಶ ಜೈಶಂಕರ್ ಅವರು ಆದೇಶ ನೀಡಿದ್ದಾರೆ. ಹಾಗಾಗಿ ಇನ್ನಷ್ಟು ದಿನಗಳ ಕಾಲ ಪವಿತ್ರಾ ಗೌಡ ಜೈಲಿನಲ್ಲಿ ಕಾಲ ಕಳೆಯಲೇ ಬೇಕಾಗಿದೆ.
ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಎಸ್ಪಿಪಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿಸಿದ ಆರೋಪ ಪವಿತ್ರಾ ಗೌಡ ಅವರ ಮೇಲಿದೆ. ಈ ಕೇಸ್ನಲ್ಲಿ ನಟ ದರ್ಶನ್ ಕೂಡ ಪ್ರಮುಖ ಆರೋಪಿ. ಇವರೆಲ್ಲರೂ ಪ್ರಭಾವಿ ವ್ಯಕ್ತಿಗಳಾದ ಕಾರಣ ಒಂದು ವೇಳೆ ಜಾಮೀನು ಸಿಕ್ಕರೆ ಸಾಕ್ಷಿ ನಾಶಕ್ಕೆ ಪ್ರಯತ್ನಿಸುವ ಸಾಧ್ಯತೆ ಇದೆ. ಹಾಗಾಗಿ ಜಾಮೀನು ನೀಡದಂತೆ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಈಗ ಕೊನೆಯ ಹಂತವನ್ನು ತಲುಪಿದೆ. ಚಾರ್ಜ್ಶೀಟ್ ಸಲ್ಲಿಸಲು ಬೆಂಗಳೂರು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಈ ಕೇಸ್ನಲ್ಲಿ ಪವಿತ್ರಾ ಗೌಡ ಅವರನ್ನು ಎ1 ಎಂದು ಪರಿಗಣಿಸಲಾಗಿತ್ತು. ಆದರೆ ಚಾರ್ಜ್ಶೀಟ್ನಲ್ಲಿ ದರ್ಶನ್ ಅವರನ್ನು ಎ1 ಎಂದು ಉಲ್ಲೇಖಿಸುವ ಸಾಧ್ಯತೆ ಇದೆ. ಅವರೇ ಈ ಕೊಲೆಯ ಸೂತ್ರಧಾರ ಎಂಬುದಕ್ಕೆ ಪೊಲೀಸರಿಗೆ ಹಲವು ಸಾಕ್ಷಿಗಳು ಸಿಕ್ಕಿವೆ. ಒಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಸದ್ಯಕ್ಕೆ ಜಾಮೀನು ಸಿಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.