ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಜನರಲ್ಲಿ ಆಕ್ರೋಶ ಭುಗಿಲೆದ್ದಿದೆ. ವೈದ್ಯರನ್ನು 36 ಗಂಟೆಗಳ ಕಾಲ ನಿರಂತರವಾಗಿ ದುಡಿಸಿಕೊಳ್ಳುವುದು ಅಮಾನವೀಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋಲ್ಕತ್ತಾ ಆರ್.ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆ ಅತ್ಯಾಚಾರ- ಕೊಲೆ ಪ್ರಕರಣದ ವಿಚಾರನೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ದೇಶಾದ್ಯಂತ ವೈದ್ಯರ ಕರ್ತವ್ಯದ ಅವಧಿ ಬಗ್ಗೆ ಕಳವಳ ವ್ಯಕ್ತಪಡಿಸಿತು. ಅಲ್ಲದೇ ಈ ಬಗ್ಗೆ ಕ್ರಮ ಕಾರ್ಯಪಡೆ ರಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿತು.
ದೇಶಾದ್ಯಂತ ವೈದ್ಯರ ಕರ್ತವ್ಯದ ಅವಧಿ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ಕೆಲ ವೈದ್ಯರು 36 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ. ನೇಮಕಗೊಂಡ 10 ಮಂದಿ ಸದಸ್ಯರ ಕಾರ್ಯಪಡೆ ಈ ಬಗ್ಗೆ ತನಿಖೆ ನಡೆಸಿ ಎಲ್ಲಾ ವೈದ್ಯರ ಕರ್ತವ್ಯದ ಸಮಯವನ್ನು ಸುವ್ಯವಸ್ಥಿತಗೊಳಿಸಲು ಪರಿಶೀಲಿಸಬೇಕು ಪೀಠ ತಾಕೀತು ಮಾಡಿದೆ.
ಅಲ್ಲದೇ ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಕೋಲ್ಕತ್ತಾ ಪೊಲೀಸರ ತನಿಖೆಯಲ್ಲಿನ ವಿಳಂಬ ಮತ್ತು ಸ್ಪಷ್ಟ ಅಕ್ರಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿರುವುದು ಅತ್ಯಂತ ಗೊಂದಲದ ಸಂಗತಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.