ಕಾರವಾರ: ಶಿರೂರು ಗುಡ್ಡ ಕುಸಿತ ಸಂತ್ರಸ್ತರಿಗೆ ಪ್ರಧಾನಿ ಮಂತ್ರಿಗಳ ವಿಪತ್ತು ನಿಧಿಯಿಂದ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲು ಅನುಮೋದನೆ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಜುಲೈ 16 ರಂದು ಭೂ ಕುಸಿತವಾಗಿ 11 ಜನ ಸಾವು ಕಂಡಿದ್ದರು. ಇದರ ಬೆನ್ನಲ್ಲೇ 8 ಜನರ ಶವ ಶೋಧ ಮಾಡಲಾಗಿತ್ತು. ಇನ್ನೂ ಮೂರು ಜನರ ಶವ ಶೋಧಕಾರ್ಯ ನಡೆಯಬೇಕಿದೆ.
ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ಕಾಗೇರಿಯವರು ವಿಶೇಷ ಪ್ರಕರಣದಡಿ ಕೇಂದ್ರಸರ್ಕಾರದ ಪರಿಹಾರ ನಿಧಿಯಡಿ ಹಣ ಬಿಡುಗಡೆ ಮಾಡಬೇಕೆಂದು ಜುಲೈ 31 ರಂದು ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಶಿರೂರು ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪ್ರಧಾನಿ ಮಂತ್ರಿಗಳ ವಿಪತ್ತು ನಿಧಿಯಿಂದ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲು ಅನುಮೋದನೆ ನೀಡಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರದಿಂದ NDRF ರಿಲೀಫ್ ಪಂಡ್ ನಿಂದ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗಿತ್ತು. ಇದೀಗ ವಿಶೇಷ ಪ್ರಕರಣ ಎಂದು ಪರಿಗಣಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಪರಿಹಾರ ನೀಡುತಿದ್ದು ಜಿಲ್ಲೆಯಲ್ಲಿ ಆದ ಭೂ ಕುಸಿತ/ಪ್ರಕೃತಿ ವಿಕೋಪ ಅವಘಡದಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಅನುದಾನ ಬಿಡುಗಡೆಯಾಗುತ್ತಿದೆ.