ಹಾವೇರಿ: ‘ ರಾಜ್ಯಪಾಲರನ್ನು ನಾವು ಅವಮಾನಿಸಿಲ್ಲ ರಾಜ್ಯಪಾಲರು ಸಂವಿಧಾನಕ್ಕೆ ಅವಮಾನ ಆಗೋ ರೀತಿ ನಡೆದುಕೊಂಡರೆ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡೋದು ನಮ್ಮ ಹಕ್ಕು’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ‘ ಸಂವಿಧಾನದ ಮುಖ್ಯಸ್ಥರಾಗಿ ಬಿಜೆಪಿಯವರ ನಿರ್ದೇಶನದಂತೆ ಅವರು ಕ್ರಮ ಜರುಗಿಸಲು ಆಗಲ್ಲ.
ಹೀಗಾಗಿ ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನೆಯ ವೇಳೆ ನಮ್ಮ ಮುಖಂಡರದ್ದು ಭಾಷೆಗಳಲ್ಲಿ ವ್ಯತ್ಯಾಸ ಆಗಿದೆ’ ಎಂದರು.
ಬೇರೆ ರೀತಿಯ ಪ್ರತಿಭಟನೆಗೆ ನನ್ನ ಸಮ್ಮತಿ ಇಲ್ಲ. ರಾಜ್ಯಪಾಲರು ದಲಿತರು ಅವರನ್ನು ಅವಮಾನ ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳ್ತಾರೆ. ಬಿಜೆಪಿಯವರು ದಲಿತರ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.
ದಲಿತರ ಮೇಲೆ ದೌರ್ಜನ್ಯ ಆದಾಗ ಕಣ್ಣು ಮುಚ್ಚಿಕೊಂಡು ಕೂತಿದ್ರು’ ಎಂದು ಆರೋಪಿಸಿದರು.ಐವಾನ್ ಡಿಸೋಜಾ ತಪ್ಪು ಮಾಡಿದರೆ ಕಾನೂನು ಕ್ರಮ ಜರುಗಿಸಲಿ. ಆದರೆ ಅವರ ಮನೆ ಮೇಲೆ ಕಲ್ಲು ಹೊಡೆಯೋದು ಹೇಡಿತನ. ದಕ್ಷಿಣ ಕನ್ನಡ ಜಿಲ್ಲೆಯ ಸಂಘ ಪರಿವಾರದ ಕಿಡಿಗೇಡಿಗಳು ಮಾಡಿದ ಕೆಲಸ ಇದು. ಮೂಡಾ ಆರೋಪ ಪ್ರತ್ಯಾರೋಪ ಆಗ್ತಾ ಇದೆ. ದೇಸಾಯಿ ಆಯೋಗ ನೇಮಕ ಆಗಿದೆ. ಆಯೋಗ ವರದಿ ಕೊಟ್ಟ ನಂತರ ವೈಟ್ನರ್ ಹಾಕಿದಾರಾ? ಇಂಕ್ ಹಾಕಿದಾರಾ , ಬ್ಲಾಕ್ ಇಂಕ್ ಹಾಕಿದಾರಾ? ಗೊತ್ತಾಗುತ್ತೆ. ಕೂಲಂಕುಶ ತನಿಖೆ ನಡೆದ ಬಳಿಕ ಸತ್ಯಾಸತ್ಯತೆ ಗೊತ್ತಾಗುತ್ತೆ. ತನಿಖೆ ಆಗುವವರೆಗೆ ಕಾಯಬೇಕು’ ಎಂದರು.