ಬೆಂಗಳೂರು: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಸರ್ಕಾರದ ನಿಯಮ ಉಲ್ಲಂಘಿಸಿ ದುಡ್ಡು ಕೊಟ್ಟವರಿಗೆ ವೃದ್ಧಾಪ್ಯ ವೇತನ ಬರುವಂತೆ ಮಾಡಿಸಿಕೊಡುತ್ತಿದ್ದ ಮಧ್ಯವರ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಮೂರು ಕಡೆಗಳಲ್ಲಿ ಪರಿಶೀಲನೆ ನಡೆಸಿದ ಸಿಸಿಬಿ ಪೊಲೀಸರು ಇನ್ನೂರಕ್ಕೂ ಹೆಚ್ಚು ಜನ ನಕಲಿ ವೃದ್ಧಾಪ್ಯ ವೇತನ ಪಡೆಯುತ್ತಿರುವುದನ್ನು ಪತ್ತೆ ಹಚ್ಚಿ ಪ್ರಮುಖ ಮಧ್ಯವರ್ತಿ ಚತುರ್ ಎಂಬಾತನನ್ನು ಬಂಧಿಸಿದ್ದಾರೆ. ವೃದ್ಧಾಪ್ಯ ವೇತನ ಪಡೆಯಲು ಮುಖ್ಯವಾಗಿ 60 ವರ್ಷ ವಯಸ್ಸಾಗಿರಬೇಕು. ಹಾಗೂ ಬಡತನ ರೇಖೆಗಿಂತ ಕೆಳಗಿರುವ ವೃದ್ಧರು ಮಾತ್ರ ಈ ಯೋಜನೆಗೆ ಅರ್ಹರು. ಇದಲ್ಲದೆ ಯೋಜನೆಯ ಲಾಭ ಪಡೆಯಲು ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಕಡ್ಡಾಯ. ಆದರೆ ಆಧಾರ್ ಕಾರ್ಡ್ ಅನ್ನು ತಿದ್ದುಪಡಿ ಮಾಡುತ್ತಿದ್ದ ಆರೋಪಿತ 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿಗೆ ಆಧಾರ್ ಕಾರ್ಡ್ ಮಾಡಿ,
ಸರ್ಕಾರದ ವೆಬ್ಸೈಟ್ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕಂಡ ಕಂಡವರು ಯೋಜನೆ ಲಾಭ ಪಡೆಯವಂತೆ ಮಾಡುತ್ತಿದ್ದನು. ಈ ಕುರಿತು ಮಾಹಿತಿ ನೀಡಿದ ಸಿಸಿಬಿ ಜಂಟಿ ಆಯುಕ್ತ ಡಾ. ಎಸ್. ಡಿ. ಶರಣಪ್ಪ, ಅಧಿಕ ಹಣ ಪಡೆದು ಇ- ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿ ಬಳಿಕ ಪಿಡಿಎಫ್ ಎಡಿಟರ್ ಮೂಲಕ ವಯಸ್ಸನ್ನು ತಿರುಚಿ ವೃದ್ಧಾಪ್ಯ ವೇತನ ಸೇವೆಗೆ ಅರ್ಹವಾಗುವಂತೆ ಮಾಡುತ್ತಿದ್ದರು. ಓರ್ವರಿಗೆ ಈ ರೀತಿ ಸೌಲಭ್ಯ ಮಾಡಿಕೊಡಲು ಐದರಿಂದ ಹತ್ತು ಸಾವಿರ ರೂಪಾಯಿ ಹಣ ಪಡೆಯುತಿದ್ದರು. ಇಷ್ಟೆಲ್ಲವನ್ನೂ ನಕಲಿ ಮಾಡಿದರೂ ಸಹ ವೆಬ್ಸೈಟ್ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡುವಾಗ ಉಪತಹಶೀಲ್ದಾರ್ ಮಟ್ಟದ ಅಧಿಕಾರಿಯ ಡಿಜಿಟಲ್ ಬೆರಳಚ್ಚು ಅಗತ್ಯವಿದೆ. ಆದರೆ ಬೆರಳಚ್ಚು ಕೂಡಾ ಬಳಕೆ ಆಗುತ್ತಿರುವುದರಿಂದ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ಸಹ ಇದೆ. ಆ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.