ಉತ್ತರ ಕನ್ನಡ: “ಆ ಗೌಡ್ರು ಏನಾದ್ರು, ಈ ಗೌಡ್ರು ಏನಾದ್ರು ಎಂದು ಕೇಳುವ ಸಂದರ್ಭ ಇದಲ್ಲ. ಯಾವುದೇ ಪಕ್ಷದವರಾದರೂ ಈ ಸಂದರ್ಭದಲ್ಲಿ ಆ ರೀತಿಯ ಚಿಂತನೆಗಳನ್ನ ಕೈಬಿಡಬೇಕು’’ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣೆ ತಿಳಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ವೇಳೆ ಮಾಧಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ನಿರಾಣಿ, “ರಾಜ್ಯದಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದನ್ನು ಬಿಟ್ಟರು. ನಮ್ಮ ದೇಶಕ್ಕೆ, ರಾಜ್ಯಕ್ಕೆ ಇನ್ನೂ ಸಾಕಷ್ಟು ಸವಾಲುಗಳಿದ್ದು, ಉದ್ಯೋಗ ಸೃಷ್ಟಿ, ಕೈಗಾರಿಕೆ ಸ್ಥಾಪನೆ, ನೀರಾವರಿ, ಕೃಷಿ ಅಭಿವೃದ್ಧಿಯಂತಹ ಕೆಲಸಗಳು ಆಗಬೇಕಿದೆ’’ ಎಂದು ಹೇಳಿದ್ದಾರೆ.
“ದೇಶ ಸ್ವತಂತ್ರಗೊಂಡು ನೂರು ವರ್ಷಗಳನ್ನ ಪೂರೈಸುವ ವೇಳೆಗೆ ಭಾರತ ಹೇಗಿರಬೇಕು ಎನ್ನುವುದನ್ನ ಎಲ್ಲರೂ ಚಿಂತಿಸಬೇಕಾಗಿದೆ. ಅದರ ಬದಲು ಯಾವುದೇ ಲಾಭವೂ ಇಲ್ಲದ, ನಷ್ಟವೂ ಇಲ್ಲದ ಇಂತಹ ಚಿಂತನೆಗಳಿಂದ ಸಮಯ ವ್ಯರ್ಥವಾಗುವುದನ್ನ ಹೊರತುಪಡಿಸಿ ಮತ್ತೇನೂ ಆಗುವುದಿಲ್ಲ. ಇದೆಲ್ಲವನ್ನ ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಎಲ್ಲರೂ ಗಮನಹರಿಸಬೇಕು’’ ಎಂದು ಅವರು ಸಲಹೆ ನೀಡಿದರು.
“ತುಮಕೂರಿನಲ್ಲಿ ಕಾರ್ಯಕರ್ತರ, ಮುಖಂಡರ ನಡುವಿನ ಭಿನ್ನಾಭಿಪ್ರಾಯದಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ರದ್ದುಗೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ನಿರಾಣಿ, ಯಾವುದೇ ಪಕ್ಷದಲ್ಲಾದರೂ ಸಮಸ್ಯೆಗಳು ಇರುವುದು ಸಹಜ. ನಮ್ಮ ರಾಜ್ಯದ ನಾಯಕರು, ರಾಷ್ಟ್ರದ ನಾಯಕರು ಅದನ್ನ ನಿಭಾಯಿಸಲು ಸಮರ್ಥರಿದ್ದಾರೆ. ಈ ಸಮಸ್ಯೆಯನ್ನ ನಾಲ್ಕು ಗೋಡೆಗಳ ಮದ್ಯೆ ಕುಳಿತು ಪರಿಹರಿಸುವ ಭರವಸೆಯಿದೆ” ಎಂದರು.
“ಇನ್ನು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ, ಮುಖ್ಯಮಂತ್ರಿ ರೇಸ್ನಲ್ಲಿ ಮುರುಗೇಶ ನಿರಾಣಿ ಹೆಸರು ಕೇಳಿಬಂದ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮಲ್ಲಿ ಸ್ಪರ್ಧಿಸುವಂತಹ 224 ಶಾಸಕರೂ ಸಹ ಮುಖ್ಯಮಂತ್ರಿ ಆಗುವ ಅರ್ಹತೆಯನ್ನ ಹೊಂದಿದ್ದಾರೆ. ಆದರೆ ಯಾರನ್ನ ಎಂಎಲ್ಎ ಮಾಡಬೇಕು, ಯಾರನ್ನು ಮಂತ್ರಿ ಮಾಡಬೇಕು, ಯಾರನ್ನ ಮುಖ್ಯಮಂತ್ರಿ ಮಾಡಬೇಕು ಎನ್ನುವ ತೀರ್ಮಾನವನ್ನ ಪಕ್ಷದ ನಾಯಕರು ತೆಗೆದುಕೊಳ್ಳಲಿದ್ದಾರೆ’’ ಎಂದು ತಿಳಿಸಿದರು.