ನೇಪಾಳದಲ್ಲಿ ಶುಕ್ರವಾರ ನದಿಗೆ ಪ್ರಯಾಣಿಕ ಬಸ್ ಉರುಳಿ ಬಿದ್ದ ಪರಿಣಾಮ 14 ಮಂದಿ ಭಾರತೀಯರು ಮೃತಪಟ್ಟಿದ್ದು, 16ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರತದ ನೋಂದಣಿ ಸಂಖ್ಯೆಯ ಬಸ್ನಲ್ಲಿ ಸುಮಾರು 40 ಪ್ರಯಾಣಿಕರಿದ್ದು, ರಾಜಧಾನಿ ಕಠ್ಮಂಡುವಿನಿಂದ 110 ಕಿಮೀ ದೂರದಲ್ಲಿರುವ ತನಾಹುನ್ ಜಿಲ್ಲೆಯಲ್ಲಿನ ಆಯಿನಾ ಪಹಾರಾದ ಮರ್ಸ್ಯಂಗ್ಡಿ ಎಂಬ ನದಿಗೆ ಬಸ್ ಉರುಳಿದೆ.
ನದಿಗೆ ಉರುಳಿ ಬಿದ್ದ ಬಸ್ ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಯುಪಿ ಎಫ್ಟಿ 7623 ನಂಬರ್ ಪ್ಲೇಟ್ ಹೊಂದಿದ್ದ ಬಸ್, ನದಿಯೊಳಗೆ ಉರುಳಿ ಬಿದ್ದಿದ್ದು, ನದಿಯ ತೀರದಲ್ಲಿ ಸಿಲುಕಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬಸ್ನ ಮೇಲಿನ ಭಾಗ ಕಿತ್ತು ಹೋಗಿದ್ದು, ಅದರ ಬಿಡಿ ಭಾಗಗಳು ಮರ್ಸ್ಯಂಗ್ಡಿ ನದಿ ತೀರದಲ್ಲಿ ಬಿದ್ದಿರುವುದು ವಿಡಿಯೋಗಳಲ್ಲಿ ಕಾಣಿಸಿದೆ. ಅಪಘಾತ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮಾಧವ್ ಪೌಡೆಲ್ ನೇತೃತ್ವದಲ್ಲಿ ಸಶಸ್ತ್ರ ಪೊಲೀಸ್ ಪಡೆ ನೇಪಾಳ ವಿಪತ್ತು ನಿರ್ವಹಣಾ ತರಬೇತಿ ಶಾಲೆಯ 45 ಪೊಲೀಸ್ ಸಿಬ್ಬಂದಿ ತಂಡ ತೆರಳಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.
ಮಹಾರಾಷ್ಟ್ರ ಸರ್ಕಾರವು ದೆಹಲಿಯ ನೇಪಾಳ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಜಲ್ಗಾಂವ್ನ ಜಿಲ್ಲಾಧಿಕಾರಿಗಳು ಭಾರತ-ನೇಪಾಳ ಗಡಿಯಲ್ಲಿರುವ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲಾಧಿಕಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಸಂತ್ರಸ್ತರ ನೆರವಿಗೆ ಪ್ರಯತ್ನಿಸಲಾಗುತ್ತಿದೆ. ಬಸ್ ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿದ್ದರಿಂದ ಮಹಾರಾಜ್ ಗಂಜ್ ಕಲೆಕ್ಟರೇಟ್ನ ಅಧಿಕಾರಿಗಳು ಸಹಾಯ ಮಾಡಲು ಗಡಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
“ಯುಪಿ (ಉತ್ತರ ಪ್ರದೇಶ) ಎಫ್ ಟಿ 7623 ನಂಬರ್ ಪ್ಲೇಟ್ ಹೊಂದಿರುವ ಬಸ್ ನದಿಗೆ ಬಿದ್ದಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ನೇಪಾಳದಿಂದ ಮೃತ ವ್ಯಕ್ತಿಗಳ ಶವಗಳನ್ನು ತರಲು ಮಹಾರಾಷ್ಟ್ರ ಸರ್ಕಾರವು ಉತ್ತರ ಪ್ರದೇಶ ಸರ್ಕಾರ ಮತ್ತು ನೇಪಾಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಫಡ್ನವೀಸ್ ಹೇಳಿದರು. ಮಹಾರಾಷ್ಟ್ರ ವಿಪತ್ತು ನಿರ್ವಹಣೆ ಪಡೆಯೊಂದಿಗೆ ರಾಜ್ಯ ಸಚಿವರಾದ ಗಿರೀಶ್ ಮಹಾಜನ್ ಮತ್ತು ಅನಿಲ್ ಪಾಟೀಲ್ ಅವರು ಬಸ್ ದುರಂತದಲ್ಲಿ ಸಾವನ್ನಪ್ಪಿದ ಭಾರತೀಯರ ಶವಗಳನ್ನು ಮರಳಿ ತರುವ ಕಾರ್ಯಾಚರಣೆಯನ್ನು ಸಂಯೋಜಿಸುತ್ತಿದ್ದಾರೆ.