ಅಮೆರಿಕದಲ್ಲಿ ದುಷ್ಕರ್ಮಿಗಳು ಗುಂಡಿಗೆ ಭಾರತೀಯ ಮೂಲದ ವೈದ್ಯರೊಬ್ಬರು ಕೊನೆಯುಸಿರೆಳೆದಿದ್ದಾರೆ. ದೇಶದ ಹಲವು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ವೈದ್ಯ ಡಾ.ರಮೇಶ ಪೆರಮಶೆಟ್ಟಿ ಅವರನ್ನು ಗುಂಡಿಕ್ಕೆ ಹತ್ಯೆ ಮಾಡಲಾಗಿದೆ.
ಮೃತ ಡಾ.ರಮೇಶ ಪೆರಮಶೆಟ್ಟಿ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯವರಾಗಿದ್ದು ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು. ಡಾ.ರಮೇಶ ಪೆರಮಶೆಟ್ಟಿ ಸ್ಥಳೀಯ ವೈದ್ಯಕೀಯ ವೃತ್ತಿಪರರ ಗುಂಪು ಕ್ರಿಮ್ಸನ್ ಕೇರ್ ನೆಟ್ವರ್ಕ್ ನ ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕರಾಗಿದ್ದರು. ಆರೋಗ್ಯ ರಕ್ಷಣೆಗೆ ನೀಡಿದ ಕೊಡುಗೆಗಳಿಂದ ಹೆಚ್ಚು ಖ್ಯಾತಿ ಗಳಿಸಿದ್ದ ಅವರು, ಟಸ್ಕಲೂಸಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಡಾ.ರಮೇಶ ಪೆರಮಶೆಟ್ಟಿ ಅವರ ನಿಧನದ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಕ್ರಿಮ್ಸನ್ ಕೇರ್ ನೆಟ್ವರ್ಕ್ ಸಂತಾಪ ಸೂಚಿಸಿದೆ. ʼʼಈ ಕ್ಷಣದಲ್ಲಿ ಅನೇಕರಿಗೆ ತಿಳಿದಿರುವಂತೆ ಡಾ.ರಮೇಶ್ ಪೆರಂಸೆಟ್ಟಿ ಅವರ ನಿಧನದ ಬಗ್ಗೆ ನಮಗೆ ಮಾಹಿತಿ ಲಭಿಸಿದೆ. ಪೆರಮಶೆಟ್ಟಿ ಅವರ ಕುಟುಂಬವು ತೀವ್ರ ದುಃಖದಲ್ಲಿದ್ದು, ಖಾಸಗಿತನಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದೆ. ಪೆರಮಶೆಟ್ಟಿ ಅವರು ಜನರಿಂದ ಹೇರಳವಾದ ಪ್ರೀತಿ ಮತ್ತು ನಂಬಿಕೆಯನ್ನು ಪಡೆದಿದ್ದಾರೆ. ಅವರು ಬಯಸಿದಂತೆ ನಾವು ಅವರನ್ನು ಗೌರವಿಸುವುದನ್ನು ಮುಂದುವರಿಸುತ್ತೇವೆʼʼ ಎಂದು ಹೇಳಿದೆ.
ʼʼಮುಂದಿನ ಕೆಲವೇ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲು ನಮ್ಮ ತಂಡ ಸಿದ್ಧವಾಗಿದೆ. ನಾವು ಅವರ ಪರಂಪರೆಯನ್ನು ಗೌರವಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ಚಿಕಿತ್ಸಾಲಯಗಳು ತೆರೆದಿರುತ್ತವೆ’ʼ ಎಂದು ಕ್ರಿಮ್ಸನ್ ಕೇರ್ ನೆಟ್ವರ್ಕ್ ತಿಳಿಸಿದೆ.
ವೈದ್ಯಕೀಯ ಕ್ಷೇತ್ರದಲ್ಲಿನ ಡಾ.ರಮೇಶ ಪೆರಮಶೆಟ್ಟಿ ಅವರ ಕೊಡುಗೆಗಾಗಿ ಟಸ್ಕಲೂಸಾದ ರಸ್ತೆಗೆ ಅವರ ಹೆಸರನ್ನು ಇಡಲಾಗಿದೆ.. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು. ಆ ಸಮಯದಲ್ಲಿ ಅವರು ಸಲ್ಲಿಸಿದ ಸೇವೆಗೆ ವಿವಿಧ ಪ್ರಶಸ್ತಿಗಳನ್ನೂ ಪಡೆದಿದ್ದರು. ಅವರು ತಮ್ಮ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದು, ಕುಟುಂಬದೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದರು. ಅವರ ಹತ್ಯೆಗೆ ಕಾರಣ ತಿಳಿದುಬಂದಿಲ್ಲ.