ಬೆಂಗಳೂರು: ಇಂದು ವಿಶ್ವ ಶ್ವಾನ ದಿನ. ಪ್ರತಿ ವರ್ಷ ಆಗಸ್ಟ್ 26 ರಂದು ವಿಶ್ವದಾದ್ಯಂತ ವಿಶ್ವ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ನಾಯಿಗೂ ಒಂದು ಕಾಲ ಬರುತ್ತೆ ಎನ್ನುವ ಮಾತಿದೆ. ಅದರಂತೆ ಪ್ರತಿ ವರ್ಷ ನಾಯಿ ದಿನವನ್ನ ಆಚರಣೆ ಮಾಡುವುದಕ್ಕೆ ಒಂದು ದಿನವನ್ನ ಮೀಸಲಿಡಲಾಗಿದೆ.
ಇದು ನಂಬಲು ಅಸಾಧ್ಯವಾದರು, ಇದನ್ನು ನೀವು ನಂಬಲೇಬೇಕು. ಹೌದು ಪ್ರತಿ ವರ್ಷ ಆಗಸ್ಟ್ 26 ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನ ಆಚರಣೆ ಮಾಡಲಾಗುತ್ತದೆ.
ಭೂಮಿಯ ಮೇಲೆ ಉಂಡ ಮನೆಗೆ ಎಂದಿಗೂ ದ್ರೋಹ ಬಗೆಯದ ಪ್ರಾಣಿ ಎಂದರೆ ಅದು ನಾಯಿ. ಅದಕ್ಕಾಗಿಯೇ ನಾಯಿಗೆ ನಿಯತ್ತು ಜಾಸ್ತಿ ಎಂದು ಹೇಳಲಾಗುತ್ತದೆ. ಮನುಷ್ಯ ಕೂಡಾ ಇದನ್ನು ಒಪ್ಪಿಕೊಂಡಿದ್ದು, ಮಾತನಾಡುವಾಗ ಸ್ವಾಭಾವಿಕವಾಗಿಯೇ ನಾನು ನಾಯಿಗಿಂತ ನಿಯತ್ತಿನವನು ಎಂದು ಬಳಸುತ್ತಾರೆ. ಇದೇ ಸಾಕಲ್ಲವೇ ನಾಯಿಗೆ ನಿಯತ್ತು ಜಾಸ್ತಿ ಇದೆ ಅಂತ. ಶ್ವಾನ ಅದು ತಾನು ಸಾಕಿದವರ ಮನೆಗೆ ಎಂದಿಗೂ ಎರಡು ಬಗೆಯದೇ, ತನ್ನ ಕರ್ತವ್ಯವನ್ನು ಚಾಚೂ ತಪ್ಪದೇ ಪಾಲಿಸುತ್ತದೆ.
ಅಂತರಾಷ್ಟ್ರೀಯ ಶ್ವಾನ ದಿನದ ಇತಿಹಾಸ:
2004 ರಲ್ಲಿ ಪ್ರಾಣಿ ಕಲ್ಯಾಣ ಕಾರ್ಯಕರ್ತೆ ( ಪೆಟ್ & ಫ್ಯಾಮಿಲಿ ಲೈಫ್ಸ್ಟೈಲ್ ಎಕ್ಸ್ಪರ್ಟ್, ಅನಿಮಲ್ ಅಡ್ವೊಕೇಟ್, ಕನ್ಸರ್ವೆಶನಿಸ್ಟ್, ಡಾಗ್ ಟ್ರೈನರ್) ಮತ್ತು ಲೇಖಕಿ ಕೋಲಿನ್ ಪೈಜ್ ಅವರು ಅಂತರಾಷ್ಟ್ರೀಯ ಶ್ವಾನ ದಿನವನ್ನು ಸ್ಥಾಪಿಸಿದರು. ಕೋಲಿನ್ ಪೈಜ್ ಅವರು ಶ್ವಾನ ದಿನದ ಆಚರಣೆಗೆ ನಿರ್ಧಿಷ್ಟವಾಗಿ ಆಗಸ್ಟ್ 26 ನೇ ದಿನಾಂಕವನ್ನು ಏಕೆ ಆಯ್ಕೆ ಮಾಡಿದರು ಎಂದರೆ, ಪೈಜ್ ಅವರು ಹತ್ತು ವರ್ಷ ಪ್ರಾಯದವರಾಗಿದ್ದಾಗ, ಆಕೆಯ ಮನೆಯವರು ಆಗಸ್ಟ್ 26 ನೇ ತಾರೀಕಿನಂದು ಶೆಲ್ಟಿ ಎಂಬ ಹೆಸರಿನ ನಾಯಿಯನ್ನು ದತ್ತು ತೆಗೆದುಕೊಂಡು ಸಾಕಿದರು.
ಹಾಗಾಗಿ ಇದೇ ದಿನದಂದು ಅವರು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಬೇಕೆಂದು ನಿರ್ಧರಿಸಿದರು. ಮಾತ್ರವಲ್ಲದೆ, ಪ್ರಪಂಚದಾದ್ಯಂತ ಪ್ರಾಣಿಗಳ ಪ್ರಾಮುಖ್ಯತೆಯನ್ನು ಸಾರಲು ಮತ್ತು ಪ್ರಾಣಿಗಳನ್ನು ದತ್ತು ಪಡೆಯಲು ಜನರನ್ನು ಪ್ರೋತ್ಸಾಹಿಸಲು ಪೈಜ್ ಅವರು ರಾಷ್ಟ್ರೀಯ ನಾಯಿಮರಿ ದಿನ, ರಾಷ್ಟ್ರೀಯ ಬೆಕ್ಕು ದಿನ, ವನ್ಯಜೀವಿ ದಿನದ ಆಚರಣೆಯನ್ನು ಕೂಡಾ ಸ್ಥಾಪಿಸಿದ್ದಾರೆ.
ಅಂತರಾಷ್ಟ್ರೀಯ ಶ್ವಾನ ದಿನದ ಆಚರಣೆಯ ಮಹತ್ವ:
ಅಂತರಾಷ್ಟ್ರೀಯ ಶ್ವಾನ ದಿನವನ್ನು ಆರಿಸುವ ಮುಖ್ಯ ಉದ್ದೇಶವೆಂದರೆ ಸ್ಥಳೀಯ ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುವುದು ಮತ್ತು ಆ ನಾಯಿಗಳಿಗೆ ಉತ್ತಮ ಜೀವನವನ್ನು ಕಲ್ಪಿಸುವುದಾಗಿದೆ. ನಮ್ಮಲ್ಲಿ ಹೆಚ್ಚಿನವರು ನಾಯಿಗಳು ನಮ್ಮ ಉತ್ತಮ ಸ್ನೇಹಿತ ಎಂದುಕೊಂಡರೂ, ನಾಯಿಗಳನ್ನು ವಿಶೇಷವಾಗಿ ಬೀದಿನಾಯಿಗಳನ್ನು ನಿಷ್ಕರುಣೆಯಿಂದ ಅವುಗಳ ಮೇಲೆ ದೌರ್ಜನ್ಯವೆಸಗುವ ಅನೇಕ ಜನರಿದ್ದಾರೆ. ಇಂತಹ ದುಷ್ಕೃತ್ಯಗಳನ್ನು ಮಾಡದಂತೆ ಈ ವಿಶೇಷ ದಿನದಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಇನ್ನೂ ಅನೇಕ ಜನರು ತಮ್ಮ ಸಾಕು ಪ್ರಾಣಿಗಳಿಗೆ ವಯಸ್ಸಾದಾಗ ರೋಗ ರುಜಿನಗಳು ಬರಲಾರಂಭಿಸಿದಾಗ ನಿಷ್ಕರುಣೆಯಿಂದ ಅಂತಹ ನಾಯಿಗಳನ್ನು ಬೀದಿಪಾಲು ಮಾಡುತ್ತಾರೆ. ಈ ರೀತಿಯ ಕ್ರೂರ ಕೆಲಸವನ್ನು ಮಾಡದಂತೆ ಜಾಗೃತಿಯನ್ನು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.