ಮಲಯಾಳಂ ಸಿನಿಮಾ ರಂಗದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ನ್ಯಾಯಮೂರ್ತಿ ಹೇಮಾ ವರದಿ ಸಲ್ಲಿಕೆಯಾಗಿದೆ. ಈ ವರದಿ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಜಸ್ಟಿಸ್ ಹೇಮಾ ಸಲ್ಲಿಸಿದ ವರದಿಯಲ್ಲಿನ ಕೆಲವು ಅಂಶಗಳು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿವೆ. ಈಗಾಗಲೇ ಕೆಲವರ ತಲೆದಂಡ ಆಗಿದೆ. ಅನೇಕ ನಟಿಯರು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಈ ವರದಿ ಬಗ್ಗೆ ಇದುವರೆಗೂ ಯಾವ ಖ್ಯಾತ ನಟರು ಮಾತನಾಡಿರಲಿಲ್ಲ. ಮೊದಲ ಬಾರಿಗೆ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿರಾಜ್, ಹೇಮಾ ವರದಿಯಲ್ಲಿನ ಹೆಸರುಗಳನ್ನು ಸರಕಾರವೇ ಬಹಿರಂಗ ಪಡಿಸಬೇಕು. ಚಿತ್ರೀಕರಣದ ಸ್ಥಳದಲ್ಲಿನ ಸುರಕ್ಷತೆಯ ಬಗ್ಗೆ ಗಮನ ಹೆರಿಸಬೇಕು. ಏಕರೂಪದ ಮಾರ್ಗಸೂಚಿಯನ್ನು ತಯಾರಿಸಬೇಕು. ತಪ್ಪು ಯಾರೇ ಮಾಡಿದ್ದರೂ ಅವರ ಮೇಲೆ ತನಿಖೆ ಆಗಿ ಶಿಕ್ಷೆಯಾಗಬೇಕು. ಮಹಿಳೆಯರು ಈ ವಿಷ್ಯದಲ್ಲಿ ಸುಳ್ಳು ಹೇಳಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ.
ಆರಂಭಿಕ ಹಂತಗಳಲ್ಲಿ ಕೆಲವು ತಪ್ಪುಗಳು ಆಗಿರಬಹುದು. ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಸಂಪೂರ್ಣ ಮತ್ತು ವಿವರವಾದ ತನಿಖೆಯ ಅಗತ್ಯವಿದೆ. ಆರೋಪಿಗಳು ತನಿಖೆಯನ್ನು ಎದುರಿಸಲೇಬೇಕು. ಮತ್ತು ತನಿಖೆ ಎದುರಿಸುವಾಗ ತಮ್ಮ ಸ್ಥಾನದಿಂದ ಕೆಳಗೆ ಇಳಿದಿರಬೇಕು ಎಂದು ಪೃಥ್ವಿರಾಜ್ ಹೇಳಿದ್ದಾರೆ.
ಮಲಯಾಳಂ ಸಿನಿಮಾ ರಂಗದ ಗುಂಪುಗಾರಿಕೆಯ ಕುರಿತಂತೆಯೂ ಪೃಥ್ವಿರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಗುಂಪುಗಾರಿಕೆಯನ್ನು ನಾನು ವಿರೋಧಿಸುತ್ತೇನೆ. ಇಂತಹ ಗುಂಪುಗಳು ಯಾವುದೇ ಸಿನಿಮಾ ರಂಗದಲ್ಲಿ ಇರಬಾರದು ಎಂದಿದ್ದಾರೆ. ಹೇಮಾ ಸಮಿತಿ ವರದಿ ಬಿಡುಗಡೆ ಆದ ನಂತರ ಯಾರೂ ಈ ಕುರಿತಂತೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಪೃಥ್ವಿರಾಜ್ ಆಡಿದ ಮಾತೂ ಕೂಡ ವೈರಲ್ ಆಗ್ತಿವೆ.