ಖ್ಯಾತ ಮಧುರೈನ ಮೀನಾಕ್ಷಿ ದೇವಾಲಯದಲ್ಲಿ ತಮಗೆ ಎದುರಾದ ಅವಮಾನದ ಬಗ್ಗೆ ನಟಿ ನಮಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತಿ ವೀರೇಂದ್ರ ಚೌಧರಿ ಜೊತೆ ದೇವಸ್ಥಾನಕ್ಕೆ ತೆರಳಿದ್ದ ನಮಿತಾ ಅವರನ್ನು ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣ ಪತ್ರ ಕೇಳಿದ್ದು ಇದರಿಂದ ನಟಿ ಆಕ್ರೋಶ ಹೊರ ಹಾಕಿದ್ದಾರೆ.
ನಟಿಯನ್ನು ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿಕೊಂಡು, ‘ನೀವು ಹಿಂದೂ ಎಂಬುದುನ್ನು ಸಾಬೀತು ಮಾಡಿ. ಜಾತಿ ಪ್ರಮಾಣಪತ್ರ ನೀಡಿ’ ಎಂದು ದೇವಸ್ಥಾನದ ಸಿಬ್ಬಂದಿ ಕೇಳಿದ್ದಾರೆ ಅಂತ ನಮಿತಾ ಮತ್ತು ವೀರೇಂದ್ರ ಹೇಳಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.
ನಮಿತಾ ಮತ್ತು ಅವರ ಪತಿ ವೀರೇಂದ್ರ ಚೌಧರಿ ಅವರು ಮಾಸ್ಕ್ ಧರಿಸಿ ದೇವಸ್ಥಾನಕ್ಕೆ ಹೋಗಿದ್ದರು. ತಾವು ದೇವಸ್ಥಾನಕ್ಕೆ ತೆರಳುವುದರ ಬಗ್ಗೆ ಒಂದು ದಿನ ಮುಂಚೆಯೇ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರು. ಜನರು ತಮ್ಮನ್ನು ಗುರುತಿಸಿದರೆ ಜನಜಂಗುಳಿ ಆಗಬಹುದು ಎಂಬ ಕಾರಣದಿಂದ ಅವರು ಮಾಸ್ಕ್ ಧರಿಸಿದ್ದರು. ದಂಪತಿಯನ್ನು 20 ನಿಮಿಷಗಳ ಕಾಲ ಕಾಯಿಸಿ, ಜಾತಿ ಪ್ರಮಾಣಪತ್ರವನ್ನು ನೀಡಿದ ಬಳಿಕವೇ ದೇವಸ್ಥಾನದ ಒಳಗೆ ಬಿಡಲಾಗಿದೆ. ‘ಈ ರೀತಿ ಬೇರೆ ಎಲ್ಲಿಯೂ ಆಗಿಲ್ಲ’ ಎಂದು ನಮಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಾವು ಹಿಂದೂಗಳು ಎಂಬುದನ್ನು ಸಾಬೀತು ಮಾಡಲು ಪ್ರಮಾಣಪತ್ರ ಕೇಳಿದರು. ಜಾತಿ ಪ್ರಮಾಣಪತ್ರವನ್ನೂ ತೋರಿಸಿ ಎಂದರು. ದೇಶದ ಬೇರೆ ಯಾವುದೇ ದೇವಸ್ಥಾನದಲ್ಲೂ ಇಂಥ ಅನುಮನ ನಮಗೆ ಆಗಿಲ್ಲ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದವಳು. ನಮ್ಮ ಮದುವೆ ನಡೆದಿದ್ದು ತಿರುಪತಿಯಲ್ಲಿ. ನನ್ನ ಮಕ್ಕಳಿಗೆ ಕೃಷ್ಣನ ಹೆಸರು ಇಟ್ಟಿದ್ದೇವೆ. ಇದನ್ನೆಲ್ಲ ತಿಳಿಸಿದ ನಂತರವೂ ನಮ್ಮ ಜೊತೆ ದೇವಸ್ಥಾನದ ಸಿಬ್ಬಂದಿ ವರಟಾಗಿ ನಡೆದುಕೊಂಡು. ಜಾತಿ ಪ್ರಮಾಣಪತ್ರ ಕೇಳಿದರು’ ಎಂದು ಮಾಧ್ಯಮಗಳ ಎದುರು ನಮಿತಾ ಅಸಮಾಧಾನ ತೋಡಿಕೊಂಡರು.
‘ನಾನು ಅನೇಕ ದೇವಾಲಯಗಳಿಗೆ ಹೋಗಿದ್ದೇನೆ. ದಕ್ಷಿಣ ಭಾರತದಲ್ಲಿ ತಿರುಪತಿಗೂ ಹೋಗಿದ್ದೇನೆ. ಈ ರೀತಿ ಯಾರೂ ಕೂಡ ಪ್ರಶ್ನೆ ಮಾಡಿಲ್ಲ. ಮೀನಾಕ್ಷಿ ಅಮ್ಮನ್ ದೇವಸ್ಥಾನದವರು ಮಾತ್ರ ಯಾಕೆ ಜಾತಿ ಮತ್ತು ಧರ್ಮದ ಪ್ರಮಾಣಪತ್ರ ಕೇಳಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ನಟಿ ನಮಿತಾ ಹೇಳಿದರು.