ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಮೃತ ಯುವ ವೈದ್ಯೆಗೆ ನ್ಯಾಯ ಸಿಗಬೇಕು ಎಂದು ಪ್ರತಿಯೊಬ್ಬರು ಆಗ್ರಹಿಸಿದ್ದಾರೆ. ಈ ಹತ್ಯೆ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಹಲವು ವೈದ್ಯರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಹೂಸ್ಟನ್, ಟೆಕ್ಸಾಸ್ ವೈದ್ಯಕೀಯ ಕೇಂದ್ರದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಪ್ರಕರಣ ಖಂಡಿಸಿ ಹತ್ಯೆಗೀಡಾದ ಕಿರಿಯ ವೈದ್ಯೆಗೆ ನ್ಯಾಯ ದೊರಕಿಸಿಕೊಡುವಂತೆ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕೋಲ್ಕತ್ತಾದ ಆರ್ಜಿಕಾರ್ ಮೆಡಿಕಲ್ ಕಾಲೇಜಿನಲ್ಲಿ ಆಗಸ್ಟ್ 9 ರ ರಾತ್ರಿ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಮೃತದೇಹ ಪತ್ತೆಯಾಗುವ ಮೊದಲು ಇದು ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಬಳಿಕ ಅದು ಅತ್ಯಾಚಾರ, ಕೊಲೆ ಎಂದು ತಿಳಿದು ಬಂದಿತ್ತು. ಈ ಹತ್ಯೆಯಲ್ಲಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಮೃತ ವೈದ್ಯೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದು ಓರ್ವನಿಂದ ನಡೆದ ಕೊಲೆಯಲ್ಲ. ಅನೇಕರಿಂದ ನಡೆದ ಸಾಮೂಹಿಕ ಅತ್ಯಾಚಾರ ಎಂದು ತಿಳಿದು ಬಂದಿದೆ.
ಈ ವೇಳೆ ಮಾಜಿ ಆರ್ಜಿಕರ್ ಪ್ರಾಂಶುಪಾಲ ಸಂದೀಪ್ ಘೋಷ್ ನಡುವಳಿಕೆಯೂ ಅನುಮಾನಗಳಿಗೆ ಕಾರಣವಾಗಿತ್ತು. ಘಟನೆ ಬಗ್ಗೆ ವಿವದಾತ್ಮಕ ಹೇಳಿಕೆ ನೀಡಿದ್ದರಿಂದ ವಿರೋಧ ವ್ಯಕ್ತವಾಗಿ, ಅವಮಾನಗಳನ್ನು ಸಹಿಸಲಾಗದೇ ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಸಂದೀಪ್ ಘೋಷ್ ಬೇರೆ ದೊಡ್ಡ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು. ಇದು ತೀವ್ರ ಟೀಕೆಗೂ ಕಾರಣವಾಗಿತ್ತು.
ಇದರ ಜತೆಗೆ ಸಂದೀಪ್ ಘೋಷ್ ಮೃತ ದೇಹಗಳನ್ನು ಮಾರಾಟ ಮಾಡಿ ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇಲಾಗಿ ವೈದ್ಯೆಯ ಹತ್ಯೆಯಲ್ಲಿ ಇವರ ಪಾತ್ರವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇದು ದೇಶಾದ್ಯಂತ ಪ್ರತಿಭಟನೆಗೆ ಕೂಡ ಕಾರಣವಾಗಿತ್ತು. ಆದರೆ, ಮಮತಾ ಬ್ಯಾನರ್ಜಿ ಸರ್ಕಾರ ಹಲವು ಅಚ್ಚರಿಯ ಕ್ರಮಗಳನ್ನು ಕೈಗೊಂಡಿದೆ. ಹತ್ಯೆ ವಿರುದ್ಧ ಆಂದೋಲನ ನಡೆಸಿದ ಹಲವು ವೈದ್ಯರನ್ನು ದೂರದ ಊರುಗಳಿಗೆ ವರ್ಗಾವಣೆ ಮಾಡಿದೆ. ಪ್ರಮುಖವಾಗಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಲ್ಲಿಯೂ ವಿಫಲವಾಗಿದೆ. ಸುಪ್ರೀಂಕೋರ್ಟ್ ಕೂಡ ಬಂಗಾಳ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ. ಬಂಗಾಳಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಹೇಯ ಕೃತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.