ಹೇಮಾ ವರದಿಯ ಬಳಿಕ ಮಲಯಾಳಂ ಚಿತ್ರರಂಗದ ಸಾಕಷ್ಟು ಕರಾಳ ಮುಖಗಳು ಆಚೆ ಬರುತ್ತಿವೆ. ನಟಿಯರು ತಮಗಾದ ಕೆಟ್ಟ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ.ಇದೀಗ ಮಲಯಾಳ ಚಿತ್ರರಂಗದ ಖ್ಯಾತ ನಟ ಮತ್ತು ಸಿಪಿಎಂ ಶಾಸಕ ಎಂ. ಮುಖೇಶ್ ವಿರುದ್ಧ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಕೇಶ್ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ.
ನಟಿಯೊಬ್ಬರ ದೂರಿನ ಆಧಾರದ ಮೇಲೆ ನಟ ಸಿದ್ದೀಕ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ನಂತರ, ಎಡ ಪಕ್ಷದ ಸರ್ಕಾರವು ಶಾಸಕ ಮುಖೇಶ್ ಅವರ ಪ್ರಕರಣದಲ್ಲಿ ಎಚ್ಚರಿಕೆಯ ನಡೆ ಅನುಸರಿಸಿದಂತೆ ಕಾಣುತ್ತಿದೆ. ವಿಶೇಷ ಪೊಲೀಸ್ ತಂಡ ನಡೆಸುತ್ತಿರುವ ತನಿಖೆಯ ಫಲಿತಾಂಶದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮುಕೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಪಿಎಂನ ಹಿರಿಯ ನಾಯಕ ಮತ್ತು ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ‘ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು, ನಟಿಯರ ಮೇಲೆ ನಟರು ನಡೆಸಿರುವ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಬಹಿರಂಗಪಡಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರವು ಕಠಿಣ ಕ್ರಮ ತೆಗೆದುಕೊಂಡಿದೆ. ಈ ವರದಿಯು ಈಗ ಕೇರಳ ಹೈಕೋರ್ಟ್ ಮುಂದೆಯೂ ಇದೆ’ ಎಂದಿದ್ದಾರೆ.
‘ಸರಿಯಾದ ಮತ್ತು ಪಾರದರ್ಶಕ ತನಿಖೆ ಕೈಗೊಳ್ಳಲಾಗುವುದು. ತನಿಖೆಯ ಫಲಿತಾಂಶ ಆಧಾರದ ಮೇಲೆ ಮುಂದಿನ ಹೆಜ್ಜೆ ಇರಿಸಲಾಗುವುದು. ಹಾಗಾಗಿ ಯಾವುದೇ ಪೂರ್ವಗ್ರಹದ ತೀರ್ಮಾನ ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ಬಾಲಗೋಪಾಲ್ ಹೇಳಿದ್ದಾರೆ.