ನವದೆಹಲಿ:- ಕೋಲ್ಕತ್ತಾ ವೈದ್ಯೆ ಪ್ರಕರಣದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಕ್ರೋಶ ಹೊರ ಹಾಕಿದ್ದಾರೆ.
ಘಟನೆಯ ಬಗ್ಗೆ, ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಮುರ್ಮು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ದೇಶದ ನಾಗರಿಕರ ಜೊತೆ ನಿಲ್ಲುವುದಾಗಿ ಹೇಳಿದ್ದಾರೆ.
ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾಚಾರ, ಕೊಲೆ ಘಟನೆಯ ಕುರಿತು ಮುರ್ಮು ಹೇಳಿಕೆಯನ್ನು ಬಿಡುಗಡೆ ಮಾಡಿದರು.
ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಭೀಕರ ಘಟನೆಯು ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಅದನ್ನು ಕೇಳಿದಾಗ ನಾನು ದಿಗ್ಭ್ರಮೆಗೊಂಡೆ. ಬೇಸರದ ಸಂಗತಿ ಅಂದರೆ ಇದೊಂದೇ ಘಟನೆ ಅಲ್ಲ. ಇದು ಮಹಿಳೆಯರ ವಿರುದ್ಧದ ಅಪರಾಧಗಳ ಸರಣಿಯ ಭಾಗವಾಗಿದೆ. ವಿದ್ಯಾರ್ಥಿಗಳು, ವೈದ್ಯರು ಮತ್ತು ನಾಗರಿಕರು ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅಪರಾಧಿಗಳು ಬೇರೆಡೆ ಅಲೆದಾಡುತ್ತಿದ್ದರು ಎಂದು ಕಿಡಿಕಾರಿದ್ದಾರೆ.
ಕಾಮುಕರಿಗೆ ಶಿಶುವಿಹಾರದ ಹೆಣ್ಣು ಮಕ್ಕಳೂ ಬಲಿಪಶುವಾಗುತ್ತಿದ್ದಾರೆ. ದೇಶದ ಹೆಣ್ಣುಮಕ್ಕಳು ಮತ್ತು ಸಹೋದರಿಯರು ಇಂತಹ ದೌರ್ಜನ್ಯಕ್ಕೆ ಒಳಗಾಗುವುದನ್ನು ಯಾವುದೇ ಸುಸಂಸ್ಕೃತ ಸಮಾಜವು ಸಹಿಸುವುದಿಲ್ಲ. ರಾಷ್ಟ್ರವು ಆಕ್ರೋಶಕ್ಕೆ ಒಳಗಾಗಿದೆ, ಅವರಲ್ಲಿ ನಾನು ಕೂಡ ಒಬ್ಬಳು. ಸಾಕು ಸಾಕು, ಇನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಒಟ್ಟಾಗಿ ಹೇಳೋಣ ಎಂದು ತಮ್ಮ ಹೇಳಿಕೆಯಲ್ಲಿ ಮುರ್ಮು ಕರೆ ನೀಡಿದ್ದಾರೆ.
2012 ರ ನಿರ್ಭಯಾ ಪ್ರಕರಣದಿಂದ ಭಾರತೀಯ ಸಮಾಜವನ್ನು ಬಾಧಿಸಿರುವ “ಸಾಮೂಹಿಕ ವಿಸ್ಮೃತಿ” ಯ ಬಗ್ಗೆ ಮುರ್ಮು ವಿಷಾದಿಸಿದರು. ಮಹಿಳೆಯರನ್ನು ಕೀಳಾಗಿ ನೋಡುವುದನ್ನು ಮುಂದುವರಿಸುವ “ಖಿನ್ನತೆಯ ಮನಸ್ಥಿತಿ” ಯನ್ನು ರಾಷ್ಟ್ರಪತಿಗಳು ಖಂಡಿಸಿದರು. “ಈ ಸಾಮೂಹಿಕ ವಿಸ್ಮೃತಿ ಅಸಹ್ಯಕರವಾಗಿದೆ” ಎಂದು ಹೇಳುವ ಮೂಲಕ ಅನೇಕ ವರ್ಷಗಳಲ್ಲಿ ಸಂಭವಿಸಿದ ಅಸಂಖ್ಯಾತ ಅತ್ಯಾಚಾರಗಳನ್ನು ಕಡೆಗಣಿಸಿ, ಸುದ್ದಿಯಾದ ಪ್ರಕರಣಕ್ಕೆ ಮಾತ್ರ ಮಹತ್ವ ನೀಡುವ ಪ್ರವೃತ್ತಿಯನ್ನು ಟೀಕಿಸಿದರು.