ನವದೆಹಲಿ: ಭಾರತ 2047ರ ವೇಳೆಗೆ 25 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದನಾ ಗುರಿ ಹೊಂದಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ನವದೆಹಲಿಯಲ್ಲಿ ಜರುಗಿದ ಮಿಂಟ್ ಸಸ್ಟೈನ್ಬಿಲಿಟಿ ಶೃಂಗಸಭೆಯ 3ನೇ ಆವೃತ್ತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2030ರ ವೇಳೆಗೆ ವಾರ್ಷಿಕ ಕನಿಷ್ಠ 5 MMT ಹಸಿರು ಜಲಜನಕ ಉತ್ಪಾದನಾ ಗುರಿಯನ್ನು ಗ್ರೀನ್ ಹೈಡ್ರೋಜನ್ ಮಿಷನ್ ಹೊಂದಿದೆ ಎಂದ ಸಚಿವರು, 1800 GW ಸ್ಥಾಪಿತ ಪಳೆಯುಳಿಕೆ ರಹಿತ ಸಾಮರ್ಥ್ಯವನ್ನು ಸ್ಥಾಪಿಸುವ ದೀರ್ಘಾವಧಿ ಯೋಜನೆ ಇದಾಗಿದೆ ಎಂದು ಹೇಳಿದರು.
125 GW ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯದಿಂದ 60-100 GW ಸಾಮರ್ಥ್ಯದ ಎಲೆಕ್ಟ್ರೋಲೈಜರ್ ಸಹ ಸ್ಥಾಪನೆಗೊಳ್ಳಲಿದ್ದು, ಇದರಿಂದಾಗಿ ವಾರ್ಷಿಕ 50 MMT ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಪ್ಪುತ್ತದೆ ” ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.ಸೌರ ಘಟಕ ಉತ್ತೇಜಿಸಲು 24,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. 13,000 MW ನವೀಕರಿಸಬಹುದಾದ ಇಂಧನ, 9,000 MW ಸೌರಶಕ್ತಿ, 4, 000 MW ವಾಯುಶಕ್ತಿ ಜತೆಗೆ ಲಡಾಖ್ನಲ್ಲಿ 12,000 MW ಬ್ಯಾಟರಿ ಶಕ್ತಿ ಇಂಧನ ಸಂಗ್ರಹಕ್ಕೆ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಜೋಶಿ ವಿವರಿಸಿದರು.
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ದೇಶದಲ್ಲಿ ಅಭೂತಪೂರ್ವ ಬದಲಾವಣೆ ತರಲಿದೆ. ಈ ಯೋಜನೆ 1 ಕೋಟಿ ಮನೆಗಳಿಗೆ ಮಾಸಿಕ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ. ಪ್ರಧಾನ ಮಂತ್ರಿ ಕುಸುಮ್ ಯೋಜನೆ ಮೂಲಕವೂ ರೈತರಿಗೆ ಸೋಲಾರ್ ಪಂಪ್ಗಳಿಗಾಗಿ ಸಬ್ಸಿಡಿ ಒದಗಿಸಲಾಗುತ್ತದೆ ಎಂದು ಕೇಂದ್ರ ಸಚಿವರು ಈ ಸಂದರ್ಭದಲ್ಲಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ನವೀಕರಿಸಬಹುದಾದ ಇಂಧನ ಮೂಲಗಳನ್ನು ಉತ್ತೇಜಿಸುತ್ತಿದೆ. ಹಸಿರು ಇಂಧನ ಬಳಕೆಯಲ್ಲಿ ಭಾರತ ಸಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವೇಗದಲ್ಲೇ ಹೆಜ್ಜೆ ಹಾಕುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.