ನವದೆಹಲಿ: ಆನ್ಲೈನ್ ವಂಚಕನೊಬ್ಬ ಸಿಜೆಐ ಚಂದ್ರಚೂಡ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಂದೇಶ ಕಳಿಸಿ ಹಣ ಕೇಳಿದ ಪ್ರಸಂಗ ನಡೆದಿದೆ. ಕೈಲಾಶ್ ಮೇಘವಾಲ್ ಎಂಬವರಿಗೆ ವಂಚಕ ಸಂದೇಶ ಕಳಿಸಿ ದೆಹಲಿಯ ಕನ್ನಾಟ್ ಬಳಿ ಸಿಲುಕಿ ಕೊಂಡಿದ್ದು, ಕ್ಯಾಬ್ಗೆ 500 ರೂ. ಕಳಿಸಿ. ನ್ಯಾಯಾಲಯಕ್ಕೆ ಹೋದ ಬಳಿಕ ಮರಳಿ ಹಾಕುವುದಾಗಿ ಹೇಳಿದ್ದಾನೆ.
ಸಂದೇಶ ಸ್ವೀಕರಿಸಿರುವ ಕೈಲಾಶ್ ಮೇಘವಾಲ್ ಅವರು ಇದನ್ನು ಎಕ್ಸ್ ಖಾತೆಯಲ್ಲಿ ಸ್ಕ್ರೀನ್ಶಾಟ್ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ನಂತರ, ಪೋಸ್ಟ್ನ್ನು ಎರಡು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸುಮಾರು 2,500 ಕ್ಕೂ ಹೆಚ್ಚು ಲೈಕ್ ಮಾಡಿದ್ದಾರೆ. ಅಲ್ಲದೇ ಲೈಕ್ ಸಂಖ್ಯೆಗಳು ಹೆಚ್ಚಾಗುತ್ತಿವೆ. ಅನೇಕ ಜನರು ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು, ಅವನು ತೋರಿದ ಅತಿಯಾದ ಆತ್ಮವಿಶ್ವಾಸಕ್ಕಾಗಿ 1,000 ರೂ. ಕಳುಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ನಲ್ಲಿ, ಅಪರಿಚಿತರೊಂದಿಗಿನ ಆನ್ಲೈನ್ ವ್ಯವಹಾರ ಅಪಾಯಕ್ಕೆ ಒಳಪಡಿಸುತ್ತದೆ. ಆರ್ಥಿಕ ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಮತ್ತೊಬ್ಬರು, ಮನವಿಯನ್ನು ಮೂರು ವಾರಗಳ ನಂತರ ಮುಂದೂಡಿ ಮತ್ತು ತೀರ್ಪು ನೀಡಲು ತ್ರಿಸದಸ್ಯ ಪೀಠವನ್ನು ರಚಿಸಿ ಎಂದು ತಮಾಷೆಯಾಗಿ ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ಸುಪ್ರೀಂ ಕೋರ್ಟ್ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೆಸರಿನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟ ವಂಚಕನ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ಸೈಬರ್ ಕ್ರೈಂ ಪ್ರಕರಣ ದಾಖಲಿಸಿದೆ.